2:01 AM

ನನ್ನ ಗೆಳತಿಯನ್ನು ಇನ್ನೂ ಸತಾಯಿಸಬೇಡ..

ಗಗನ್,
ನೀನೊಬ್ಬ ಮಹಾ ದುರದ್ರಷ್ಟವಂತ. ಬಳಿ ಬಂದಿದ್ದ ಅಪರಂಜಿಯನ್ನು ಅನ್ಯಾಯವಾಗಿ ಸತಾಯಿಸಿಬಿಟ್ಟೆಯಲ್ಲೋ.. ಇನ್ನೆಂದೂ ನಿನಗೆ ಅದು ಸಿಗಲಾರದು. ಆದರೂ ಅದು ಸದಾ ನಿನ್ನ ನೋಡುತ್ತಿರುತ್ತೆ ನಕ್ಷತ್ರವಾಗಿ, ಎದೆಯಲ್ಲಿ ನಿನಗಾಗಿ ಒಂದಿಷ್ಟು ಪ್ರೀತಿ ಬಚ್ಚಿಟ್ಟುಕೊಂಡು. ನಿನಗೆ ಪ್ರಣತಿಯಂತಹ ಚಿನ್ನವನ್ನು ಪಡೆಯುವ ಯೋಗ, ಯೋಗ್ಯತೆ ಎರಡೂ ಇರಲಿಲ್ಲ ಕಣೋ ಗಗನ್..
ತಾನಾಗಿ ಬಂದ ಪ್ರೀತಿ ಹೂವನ್ನು ಹಿಚುಕಿ ಹಾಕಿ ಬಿಟ್ಟೆಯಲ್ಲೋ.. ನೀನು ತುಂಬಾ ದೊಡ್ಡ ತಪ್ಪು ಮಾಡಿದೆ. ನಿನ್ನಲ್ಲಿ ಹ್ರದಯ , ಮನಸ್ಸು ಇದ್ದರೆ ಅವುಗಳನ್ನು ಕೇಳು ಗಗನ್, ನನ್ನ ಪ್ರಣತಿ ನಿನಗಾಗಿ ಎಷ್ಟು ಕನಸುಗಳನ್ನು ಹೆಣೆದಿದ್ದಳು ನಿದ್ರೆಗಳಿಗೆ ಚಕ್ಕರ್ ಕೊಟ್ಟು ಎಂದು...ನಿನ್ನ ಪಾಲಿಗೆ ಅವಳ ನೆನಪುಗಳೂ ಸಿಗಲಾರವು ಯಾಕೇಂದ್ರೆ ಅವೆಲ್ಲ ಬರೀ ನನ್ನವೇ...

ನಾವಿಬ್ಬರೂ ತೊದಲು ನುಡಿದದ್ದು,ತಪ್ಪು ತಪ್ಪಾಗಿ ಹೆಜ್ಜೆ ಇಟ್ಟು ಬಿದ್ದೆದ್ದು ನಡೆದದ್ದು ಎಲ್ಲಾ ಒಟ್ಟಿಗೇ.. ನಮ್ಮಿಬ್ಬರ ಮನಸುಗಳಿಗೆ ಯಾವುದೇ ಬೇಲಿ ಇರಲಿಲ್ಲ. ಅವಳು ತನ್ನ ಮನಸ್ಸನ್ನು ಪೂರ್ತಿಯಾಗಿ ನನ್ನೆದುರು ಬಿಚ್ಚಿಡುತ್ತಿದ್ದಳು. ಮೊದಲ ಬಾರಿ ನಿನ್ನ ಕಂಡಾಗ ಅವಳು ನನ್ನ ಹತ್ತಿರ ಏನು ಹೇಳಿದ್ದಳು ಗೊತ್ತಾ ಗಗನ್?.. " ಸುಮೀ, ನನ್ನ ಕನಸ ಕದ್ದ ರಾಜಕುಮಾರ ಸಿಕ್ಕಿ ಬಿಟ್ಟ ಕಣೇ.. ಅವನ ಕಂಡ್ರೆ ನನ್ನ ನಾನೆ ಮರೆತು ಬಿಡ್ತೀನಿ. ಎಷ್ಟು handsome ಆಗಿದಾನೆ ಗೊತ್ತ? ಮುಖದಲ್ಲಿ ಎಳೆದು ತಂದ ಹಾಗಿರೋ ಗಾಂಭೀರ್ಯ, ಚಿಗುರು ಮೀಸೆ, ಗುಂಗುರು ಕೂದಲು, ಕಣ್ಣ ಬೆಳಕಲ್ಲಿ ಸಾವಿರ ನಕ್ಷತ್ರಗಳು. ಆದ್ರೆ ಮಾತಾಡ್ಸೋದಿಕ್ಕೆ ಭಯ ಕಣೆ"... College ನಲ್ಲಿ
first day ಸೀನಿಯರ್ಸ್ ಗಳ ಜೊತೆಗೇ ಹೆದರದೆ ಮಾತಾಡಿದ್ದ ಹುಡ್ಗಿಗೆ ಎಂಥ ಭಯ? ಅಂದುಕೊಂಡು ಅವಳ ಮುಖ ನೋಡುವಾಗ ಕೆನ್ನೆ ಕೆಂಪಾಗಿತ್ತು. ’ಭಯ ಅಲ್ಲ ಅದು, ನಾಚಿಕೆ’ ನನ್ನ ಮನಸ್ಸು ಹೇಳಿತು. ದಿನಾ ಬೆಳಿಗ್ಗೆಯಿಂದ ರಾತ್ರಿವರೆಗೆ ಲೆಕ್ಕವಿಲ್ಲದಷ್ಟು ಬಾರಿ ನಿನ್ನ ಬಗ್ಗೆ ಹೇಳ್ತಿದ್ದಳು. ಮತ್ತೆ ನಾ ಮಲಗಿದ ಮೇಲೂ ನಿದ್ರೆ ಮಾಡದೆ ನಿನ್ನದೇ ಧ್ಯಾನ ಅವಳಿಗೆ, ಯಾಕಂದ್ರೆ
ಬೆಳಿಗ್ಗೆ ಕೆಂಪಾಗಿರುತ್ತ್ತಿದ್ದ ಅವಳ ಕಣ್ಣುಗಳು ಅವಳು ನಿದ್ರೆ ಮಾಡಿಲ್ಲ ಅಂತ ಸಾರಿ ಹೇಳುತ್ತಿತ್ತು. ನಾನೆಷ್ಟು ಬಾರಿ ಹೇಳಿದ್ದೆ ಅವಳಿಗೆ.., "ಪ್ರಣೀ, ಈ ಪ್ರೀತಿ, ಪ್ರೇಮ ಎಲ್ಲ ಭ್ರಮೆ ಕಣೇ..ಸುಮ್ಮನೆ ಅಪ್ಪ ಅಮ್ಮ ತೋರಿಸಿದ ಹುಡ್ಗನ್ನ ಮದ್ವೆಯಾಗಿ ಸುಖವಾಗಿರು. ನೀನೊಬ್ಬಳೇ ಮಗಳು ಅವ್ರಿಗೆ. ನೋವು ಕೊಡ್ಬೇಡ" ಅಂತ.

ಅವಳನ್ನು ಕಂಡು ನೀನು ಮೊದಲ ಸಲ ಮುಗುಳ್ನಕ್ಕ ದಿನ ಅವಳ ಪಾಲಿಗೆ ಸ್ವರ್ಗಾನೇ ಸಿಕ್ಕಷ್ಟು ಖುಶಿಯಾಗಿದ್ದಳು. "ನೋಡಿದ್ಯಾ? ನನ್ನ ರಾಜಕುಮಾರ ನಂಗೆ ಸಿಕ್ಕೆ ಸಿಗ್ತಾನೆ ಅಂತ ಹೇಳಿರಲಿಲ್ವಾ ನಾನು?" ಎಂದವಳ ಖುಶಿಯಲ್ಲೇ ನಾನೂ ಖುಶಿಯಾಗಿದ್ದೆ. ಆದ್ರೆ ಮಾರನೇ ದಿನ ನೀನು ಲೈಬ್ರೆರಿಯಲ್ಲಿ ಅವಳೆದುರೇ ಕೂತಿದ್ದರೂ ಅವಳನ್ನು ನೋಡಲಿಲ್ಲ ಅಂತ ಹೇಳಿದ ದಿನ ಮುಖ ಬಾಡಿತ್ತು.ಅಲ್ಲಿ ಖುಶಿ ಇರಲಿಲ್ಲ ನಿಜ, ಆದರೆ ಅದು ಅಳು, ನೋವು ಆಗಿರಲೂ ಇಲ್ಲ... ಅಪ್ಪನ ಬಳಿ ಪದೇ ಪದೇ ಹೇಳಿದ್ದರೂ ಗೊಂಬೆ ಮರೆತು ಬಂದ ಅಪ್ಪ ನಾಳೆ ತಂದೇ ತರ್ತೀನಿ ಅಂದಾಗಿನ ಭಾವ....

ಅವಳಲ್ಲಿ ಅಚಲ ವಿಶ್ವಾಸವಿತ್ತು ಗಗನ್.. ನಿನ್ನನ್ನು ಒಲಿಸಿಯೇ ಒಲಿಸಿಕೊಳ್ಳುವ ಅಪಾರ ನಂಬಿಕೆ ಇತ್ತು... ಇಲ್ಲಾಂದ್ರೆ ಅವಳು ಅಪ್ಪ ಅಮ್ಮ ತೋರಿಸಿದ ಹುಡ್ಗನ್ನ ನಿರಾಕರಿಸಲಾಗದೆ, ನಿನ್ನ ಮರೆಯಲಾಗದೆ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು..
ಆದ್ರೆ ನನ್ನ ಪ್ರಣತಿ ಧೈರ್ಯವಂತೆ. ಅವಳು ನಿನ್ನ ಒಲಿಸಿಕೊಳ್ಳಲಾರದೆ ಹೋಗಿದ್ದರೆ, ಜೀವನ ಪೂರ್ತಿ ಹಾಗೆ ಇದ್ದು ಬಿಡುತ್ತಿದ್ದಳು ನಿನ್ನ ನೆನಪುಗಳ ಹನಿಯಲ್ಲಿ ಮೀಯುತ್ತಾ.......

ಅವತ್ತು ನನ್ನ ಕಾಲ ಮೆಲೆ ಮಲಗಿ ನನ್ನ ಕೈ ಹಿಡಿದು ಕೊನೆಯುಸಿರೆಳೆಯುತ್ತ ಏನು ಕೇಳಿದ್ಲು ಗೊತ್ತಾ? "ಸುಮೀ, ನನ್ನ ಗಗನ್ ನೋಡೋಕೆ ಬರಲೇ ಇಲ್ವೇನೆ?" ನನ್ನ ಬಾಯಿಂದ ಮಾತೇ ಹೊರಡ್ಲಿಲ್ಲ ಗಗನ್.. ಏನೂ ಹೇಳಲಾರದೇ ಕುಳಿತಿದ್ದೆ.. ಕೊನೆ ಕ್ಷಣಗಳನ್ನೆಣಿಸುತ್ತಾ ತಾಯಿ ಕಾಲ ಮೇಲೆ ಮಲಗಿದ ಮಗು "ಅಪ್ಪ ಗೊಂಬೆ ತಂದರಾ?" ಎಂದು ಕೇಳಿದಂತಿತ್ತವಳ ನೋಟ.. ನನ್ನ ಕರುಳು ಹಿಂಡಿದಂತಾಗುತ್ತಿತ್ತು.. ಅವಳು ನನ್ನ ಕಣ್ಣೊರೆಸುತ್ತಿದ್ದಳು. ಅಷ್ಟಾದರೂ ಅವಳಿಗೆ ನಿನ್ನ ಮೇಲೆ ಚೂರು ಸಿಟ್ಟಿರಲಿಲ್ಲ. ಕೊನೆಯ ಕ್ಷ್ಣಣದವರೆಗೂ ನೀನು ಬರಬಹುದೆಂಬ ಆಸೆ ಇತ್ತು. ಆ ಕಣ್ಣುಗಳಲ್ಲಿದ್ದುದ್ದು ಬೆಟ್ಟದಷ್ಟು ಪ್ರೀತಿ... ಆ ಪ್ರೀತಿಯ ಮೇಲೆ ಪುಟ್ಟ ನಂಬಿಕೆ, ಮತ್ತೆ ಒಂದಿಷ್ಟು ಕನಸುಗಳು.... ನೀನು ಎಲ್ಲವನ್ನೂ ಕ್ಷಣದಲ್ಲೆ ಛಿದ್ರ ಮಾಡಿಬಿಟ್ಟೆಯಲ್ಲ... ಸತಾಯಿಸಿ ಸತಾಯಿಸಿ ಅವಳ ಕಾಯುವಿಕೆಯನ್ನೆ ನಿಲ್ಲಿಸಿಬಿಟ್ಟೆಯಲ್ಲ... ಆದರೂ ಅವಳು ನಿನ್ನನ್ನು ನೋಯಿಸಲಾರಳು. ನಿನಗಾಗಿ ಕಾಯುವುದರಲ್ಲೇ ಅವಳಿಗೆ ಹಿತವಾದ ಸುಖವಿತ್ತು.. ಒಂದೇ ಒಂದು ದಿನ ನಿನ್ನ ಬಗ್ಗೆ ಸಿಟ್ಟು, ಕೆಟ್ಟ ಮಾತು ಅವಳ ಬಾಯಿಂದ ಬರಲಿಲ್ಲ. ಅದು ಕಣೋ ನಿಜವಾದ ಪ್ರೀತಿ. ತಾಯಿಯ ಪ್ರೀತಿ ಥರ ನಿಷ್ಕಲ್ಮಶ, ನಿಷ್ಕಾಮ ಪ್ರೀತಿ.. ನೀನು ಅವಳನ್ನು ಪ್ರೀತಿಸುವುದು ಅವಳಿಗೆ ಬೇಕಾಗಿತ್ತು, ಹಾಗಂತ ನೀನು ಪ್ರೀತಿಸದೆ ಇದ್ದರೂ ಅವಳು ನಿನ್ನನ್ನು ಪ್ರೀತಿಸುತ್ತಲೆ ಇರುತ್ತಿದ್ದಳು ಸದಾ.....

ನಾನು ನಿನಗೆ ಬೈದರೆ ನನ್ನ ಪ್ರಣತಿಯ ಹ್ರದಯ ಒಡೆದು ಹೋಗುತ್ತೆ. ನನ್ನ ಪ್ರಣತಿಗೋಸ್ಕರ ನಾನು ನಿನ್ನ ಕ್ಷಮಿಸಿದ್ದೇನೆ. ಕೂಡಲೇ ಹೊರಟು ಬಂದು ಬಿಡು ತಂಗಾಳಿಯ ಜೊತೆಗೇ... ನನ್ನ ಪ್ರಣತಿಯ ಕಣ್ಣಿನಲ್ಲಿದ್ದಂತೆ ಅವಳ ಫೋಟೊ ಎದುರಿಗೂ ಒಂದು ಪ್ರಣತಿ ಉರಿಯುತ್ತಿದೆ. ಅದರ ತುಂಬಾ ಪ್ರೀತಿ..... ಒಮ್ಮೆ ಬಂದು ಅವಳ ಆ ಪ್ರೀತಿ ತುಂಬಿದ ಮುಖ ನೋಡು, ಅದನ್ನು ಅನುಭವಿಸು... ಆಗ ನಿನ್ನ ಕಣ್ಣಿಂದ ಉದುರೋ ಪ್ರತಿ ಹನಿಯಲ್ಲೂ ಪ್ರಣತಿ ’ಮುತ್ತಾ’ಗಿ ಬರುತ್ತಾಳೆ ಗಗನ್.... ಪ್ಲೀಸ್... ನನ್ನ ಗೆಳತಿಯನ್ನು ಇನ್ನೂ ಸತಾಯಿಸಬೇಡ....

3 comments:

ಶರಶ್ಚಂದ್ರ ಕಲ್ಮನೆ said...

ರೇಷ್ಮ ಅವ್ರೆ,
ಬ್ಲಾಗ್ ಲೋಕಕ್ಕೆ ನಿಮಗೆ ಸ್ವಾಗತ. ಬರಹ ಚನ್ನಾಗಿದೆ. ಇದೇನು ನಿಜವಾಗ್ಲು ನಡೆದಿದ್ದೋ ಅತ್ವ ನಿಮ್ಮ ಕಲ್ಪನೆಯ ಕಥೆಯೋ? ಹೀಗೆ ನಿಮ್ಮಿಂದ ಒಳ್ಳೆಯ ಬರಹಗಳು ಬರುತ್ತಲಿರಲಿ.

-ಶರಶ್ಚಂದ್ರ ಕಲ್ಮನೆ

mruganayanee said...

new concept
ಸಾಮಾನ್ಯವಾಗಿ ಹುಡುಗಿ ತನ್ನ ಹುಡುಗನಿಗೆ ಅಥವ ಹುಡುಗ ತನ್ನ ಹುಡುಗಿಗೆ ಪತ್ರ ಬರೀತಾರೆ. this one is completely new! liked it for its newness...

ರೇಶ್ಮಾ ಎನ್ said...

thanx sir,
idu kalpane matra... nadediddalla...