2:47 AM

ನಾನು, ಅವಳು ಮತ್ತು ಒಂದು ನವಿಲುಗರಿ ಜಗಳ

"ನಾನು ಯಾಕಾದ್ರೂ ಅವಳ ಬಗ್ಗೆ ಪೇಪರ್ ನಲ್ಲಿ ಬರೆದನೇನೋ ಅನಿಸ್ತಿದೆ. ಅದ್ಯಾರೋ ಹೇಳಿದ್ರು ಅಂತ ಕಲ್ಪನೆಯ ಕತೆ ಎಲ್ಲ ಬಿಟ್ಟು ಸತ್ಯ ಘಟನೆಗಳನ್ನ ಬರೆಯೋಕೆ ಹೊರಟುಬಿಟ್ಟೆ. ಇಲ್ಲದಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಅವಳು ಅದನ್ನು ನೋಡ್ಬಿಟ್ರೆ ಏನು ಮಾಡೋದು?" ಪ್ರಿಯಾಳ ಹತ್ರ ಕೇಳಿದೆ. ಪ್ರಿಯಾ ಸಮಾಧಾನಿಸಿದಳು."ಏನೂ ಆಗೊಲ್ಲ. ಹೆದ್ರಬೇಡ. ಅವಳು ಇದನ್ನೆಲ್ಲ ಎಲ್ಲಿ ಓದ್ತಾಳೆ? ಅಷ್ಟಕ್ಕೂ ನೀನು ಅವಳ ಹೆಸರು ಹಾಕಿಲ್ವಲ್ಲ. ಏನೂ ತೊಂದ್ರೆಯಿಲ್ಲ ಬಿಡು."
"ಆದರೂ ನಾನು ಮಾಡಿದ್ದು ತಪ್ಪಾಯ್ತೇನೋ ಅನಿಸ್ತಿದೆ ಕಣೇ.. ಅವಳ ಖಾಸಗಿ ಬದುಕನ್ನು ಹೀಗೆ ಹರಾಜು ಹಾಕೋದಿಕ್ಕೆ ನಂಗೆ ಏನು ಅಧಿಕಾರ ಇದೆ ಹೇಳು.ಅವಳು ಅದನ್ನ ಓದಿದ್ರೆ ಏನಾಗುತ್ತೋ ಅನ್ನೋ ಭಯದಿಂದ ನಿದ್ರೆನೇ ಬರ್ತಿಲ್ಲ..."ನಾನು ಹೇಳಿದಾಗ ಪ್ರಿಯಾಗೂ ಸ್ವಲ್ಪ ಭಯವಾಗಿರಬೇಕು. ಸುಮ್ಮನೆ ತಲೆ ಮೇಲೆ ಕೈಯಿಟ್ಟು ಕುಳಿತು ಬಿಟ್ಟಳು.

ನಾನು ಹೀಗೆಲ್ಲ ತರಲೆ ಮಾಡಿಕೊಂಡಿದ್ದು ಅಣ್ಣಂಗೆ ಗೊತ್ತಾದ್ರೆ ಅಂತ ಭಯವಾಯ್ತು. ಬೇರೆ ಯಾವ ದಾರಿನೂ ಕಾಣಿಸ್ಲಿಲ್ಲ.
ಮನಸ್ಸು ನಾನು ಮಾಡಿದ್ದೇ ಸರಿ ಅಂತ ನನ್ನ ಸಮರ್ಥಿಸ್ತಿತ್ತು. ಕೊನೆಗೆ ಸ್ವಲ್ಪ ಹುಂಬ ಧೈರ್ಯ ಮಾಡಿ ಹೇಳಿದೆ. "ಪ್ರಿಯಾ, ನಾಳೆ ಅವಳನ್ನು ಮನೆಗೆ ಕರೆದು ಬಾ. ಎಲ್ಲಾ ಹೇಳಿಬಿಡ್ತೇನೆ. ಹಾಗೇನಾದ್ರು ಅವಳು ಸಿಟ್ಟು ಮಾಡ್ಕೊಂಡು ಸಂಬಂಧ ಮುರಿದುಕೊಂಡ್ರೆ, ’ಒಳ್ಳೇದೇ ಆಯ್ತು. ಯಾವತ್ತೂ ನಮ್ಮದು ಆಗಿರದೇ ಇದ್ದ ಸಂಬಂಧ ಒಂದು ಕಡಿದು ಹೋಯ್ತು’ ಅಂತ ಖುಶಿಯಾಗಿ ಇದ್ದುಬಿಡೋಣ" ಅಂದೆ. ಪ್ರಿಯಾಗೆ ನನ್ನ ಯೋಚನೆ ಸರಿ ಕಾಣಿಸಲಿಲ್ಲ. "ನಾವಾಗಿ ಕರೆದು ಹೇಳಿದ್ರೆ, ಅವಳು ಏನು ತಿಳ್ಕೋಬಹುದು? ಬೇಡ. ಅವಳೇ ನೋಡಿದರೆ ನೋಡಲಿ. ಇಲ್ಲಾಂದ್ರೆ ಬೇಡ ಬಿಡು. ನಾವೂ ಸುಮ್ಮನಿದ್ದು ಬಿಡೋಣ." ಅಂದಳು ಪ್ರಿಯಾ. "ಸರಿ ಹಾಗಾದ್ರೆ. ನೇರವಾಗಿ ಹೇಳೋದು ಬೇಡ. ಅವಳನ್ನು ಊಟಕ್ಕೆ ಕರೆದು ತಾ. ನಾನು manage ಮಾಡ್ತೀನಿ." ಅಂದೆ ಮತ್ತದೇ ಹುಂಬ ಧೈರ್ಯದಲ್ಲಿ.

ಪ್ರಿಯಾ ಹೋಗಿ ಹೇಳಿ ಬಂದಳು. ಮಾರನೆ ದಿನ ಅವಳು ನಗ್ತಾ ನಮ್ಮನೆಗೆ ಬಂದಳು. ಪ್ರಿಯಾ ಅಡುಗೆ ಕೋಣೆ ಬಿಟ್ಟು ಹೊರಗೆ ಬರಲೇ ಇಲ್ಲ. ಪ್ರಿಯಾನೂ ಜೊತೆಗೇ ಇದ್ದಿದ್ದರೆ ಚೆನ್ನಾಗಿತ್ತು ಅನಿಸಿತು. ಧೈರ್ಯ ತಂದುಕೊಂಡು ತುಂಬಾ ಹೊತ್ತು ಅದೂ ಇದೂ ಮಾತನಾಡಿದ ಮೇಲೆ " ಈಗ ಬಂದೆ ಇರು" ಅನ್ನುತ್ತಾ ಅಡುಗೆ ಕೋಣೆಗೆ ಎದ್ದು ಹೋದೆ. ಎಲ್ಲಾ ನಾನಂದುಕೊಂಡ ಹಾಗೇ ನಡೆಯುತ್ತಿತ್ತು. ನಾನು ಬಾಗಿಲ ಮರೆಯಲ್ಲಿ ನಿಂತು ನೋಡ್ತಾ ಇದ್ದೆ. ನಾನು ಎದ್ದು ಬಂದ ಮೇಲೆ ಅವಳು ಓದೋಕೆ ಅಂತ ಟೇಬಲ್ ಮೇಲೆ ನಾನಿಟ್ಟಿದ್ದ ಆ ಪೇಪರ್ ತೆಗೆದುಕೊಂಡು ಓದತೊಡಗಿದಳು. ನಾನು ಉಸಿರು ಬಿಗಿ ಹಿಡಿದು ಅವಳನ್ನೇ ನೋಡ್ತಾ ಮುಂದೆ ನಡೆಯಬಹುದಾದ ದುರಂತ ಮತ್ತೆ ಗಲಾಟೆಗಳಿಗೆ ಮನಸಿಕವಾಗಿ ಸಿದ್ಧಳಾಗ್ತಿದ್ದೆ.
ಅವಳು ಓದ್ತಾ ಇದ್ದಳು............. ಓದಿ ಮುಗಿಸಿರಬೇಕು... ಆ ಲೇಖನದ ತುದಿಯನ್ನು ದಿಟ್ಟಿಸಿ ನೋಡ್ತಿದ್ದಾಳೆ. "ಹೌದು.. ಅವಳಿಗೆ ಈಗ ನನ್ನ ಮೇಲೆ ಕೋಪ ಬರುತ್ತೆ. ಕೂಗಾಡ್ತಾಳೆ. ಆದ್ರೆ ನಾನು ಏನೂ ಮಾತನಾಡದೆ ಸುಮ್ಮನೆ ಕೇಳ್ತಿರಬೇಕು. ಅವಳು ಕೂಗಾಡಿ, ಕಿರುಚಾಡಿ ಸುಮ್ಮನಾಗ್ತಾಳೆ. .." ನಾನು ಕಲ್ಪನೆಯಲ್ಲಿ ಮುಳುಗಿದ್ದೆ. ಪ್ರಿಯ ನನ್ನ ಬೆನ್ನು ತಟ್ಟಿದಾಗ ವಾಸ್ತವಕ್ಕೆ ಬಂದೆ. ಪ್ರಿಯ ಏನೂ ಮಾತನಾಡದೆ ತೋರುಬೆರಳಿಂದ ಅವಳನ್ನು ತೋರಿಸಿದಳು. ಅವಳು ಚೂರೂ ಸಿಟ್ಟು ಮಾಡ್ಕೊಂಡಿರಲಿಲ್ಲ.... ಬದಲಿಗೆ ಅಳ್ತಿದ್ದಳು. ನಂಗೆ ಗೊಂದಲ.... ಏನೂ ಅರ್ಥವಾಗ್ಲಿಲ್ಲ. ಪ್ರಿಯ ಸಹ ನನ್ನ ಹಾಗೆ ಗಲಿಬಿಲಿಯಾಗಿದ್ದಳು. ನನ್ನ ಮುಖವನ್ನೇ ನೋಡ್ತಿದ್ದಳು. ಇಬ್ಬರೂ ನಿಧಾನ ಹೊರಗೆ ಹೋದೆವು.

ಅವಳು ಇನ್ನೂ ಅಳುತ್ತಲೇ ಇದ್ದಳು. ನಾನು ಅವಳ ಪಕ್ಕ ಕುಳಿತು "ಏನಾಯ್ತು?" ಕೇಳಿದೆ, ಏನೂ ಗೊತ್ತಿಲ್ಲದೋರ ಥರ. ಮೌನವಾಗಿ ಪೇಪರ್ ತೆಗೆದು ನನ್ನ ಕೈಲಿಟ್ಟಳು. "ಏನೋ ನೆನಪಾಯ್ತು ಅಷ್ಟೇ...." ಅನ್ನುತ್ತಾ ಕಣ್ಣೊರೆಸಿಕೊಂಡಳು. ನಾನು ಹೆಚ್ಚು ಕೆದಕಿ ಕೇಳಲಿಲ್ಲ. ’ ಅವಳು ಬರೆದಿರುವ ನನ್ನ ಹೆಸರು ನೋಡಿಲ್ವಾ? ಅಥ್ವಾ ನೋಡಿಯೂ ಹೀಗೆ ನಾಟಕ ಮಾಡ್ತಿದಾಳಾ?’ ಅಂದುಕೊಂಡೆ. ಯಾವಾಗ್ಲೂ ಸಮರ್ಥಿಸ್ತಿದ್ದ ನನ್ನ ಮನಸ್ಸೂ ನನ್ನ ಪರ ವಹಿಸಲಿಲ್ಲ. ’ಚಿಕ್ಕಂದಿನಲ್ಲಿ ನಮ್ಮ ನಡುವೆ ನವಿಲುಗರಿಗಾಗಿ ನಡೆದ ಒಂದು ಚಿಕ್ಕ ಜಗಳಕ್ಕೆ ನಾನು ಹೀಗೆ ಸೇಡು ತೀರಿಸಿಕೊಂಡೆನಾ?’ ಅವಳನ್ನು ನೋದಲು ಧೈರ್ಯ ಸಾಲದೆ ತಲೆ ಕೆಳಗೆ ಮಾಡಿದೆ. ಪರಿಸ್ಥಿತಿ manage ಮಾಡುವ ಧೈರ್ಯ ಕರಗಿ ಹೋದಂತನಿಸಿತು. ಅಷ್ಟರಲ್ಲಿ ಪ್ರಿಯಾ "ಬನ್ನಿ ಊಟ ಮಾಡೋಣ. ಪಾಯಸ ತಣಿದು ಹೋಗ್ತಿದೆ" ಅಂದಳು. ನಾನೂ ಸ್ವಲ್ಪ ಸುಧಾರಿಸಿಕೊಂಡೆ. "ಬಾ.. ಆಮೇಲೆ ಮಾತಾಡೋಣ" ಎಂದೆ. ಅವಳು ಕೈ ತೊಳೆಯಲು ಎದ್ದು ಹೋದಳು. ಪ್ರಿಯಾ ಅಡುಗೆ ಕೋಣೆಗೆ ಹೋದಳು. ನಾನು ಯಾರಿಗೂ ಕಾಣಿಸದ ಹಾಗೆ ಆ ಪೇಪರ್ ನ್ನು ಬೇರೆ ಕಡೆ ಇಟ್ಟು ಬಿಟ್ಟೆ. ಪೇಪರ್ ಮೇಲೆ ಅವಳ ಕಣ್ಣೀರಿನ ಒಂದು ಹನಿ ನಗುತ್ತಿತ್ತು.

7 comments:

Prakash Payaniga said...

enri eneno bardu gelatiyannu alisidra?
kopiskobedi,
nawu barewa lekhanagalu yawattu wastawawagirabeku. agale adu 4 janara hrudaya tattuwudu. neewu gelatiya jeewanada satya ghatanegalannu katheyaagisiddu khandita tappalla.

ಕನಸು said...

~ನಾನು ,ಅವಳು ಮತ್ತು ಒಂದು ನವಿಲಗರಿ ಜಗಳ~ ಬರಹ ನಂಗೆ ಯಾಕೋ ತುಂಭಾ ಹಿಡಿಸಿತ್ತು. ಅದ್ಬುತ್ತ ವಾಗಿದೆ
ಅಭಿನಂದೆನೆಗಳು
-ಕನಸು
ಬೆಳಗಾವಿ

ರೇಶ್ಮಾ ಎನ್ said...

ellarigu dhanyavaadagaLu.:)

ranjith said...

ನವಿಲುಗರಿ ಜಗಳ ನವಿಲುಗರಿಯಷ್ಟೇ ಮುದ್ದಾಗಿ ಮುಗಿದದ್ದು ಖುಷಿಕೊಟ್ಟಿತು.(ಜಗಳಕ್ಕೆ ಇದು ಹೊಸ ಪದಪ್ರಯೋಗ ಅಲ್ಲವೆ?)

ಇಲ್ಲದಿದ್ದರೆ ಅದೆರಡೂ ಪಾತ್ರಗಳ ಮನದ ಪಾತ್ರೆಯಲಿ ಜಗಳ ಬೇಯುತ್ತಲೇ ಇರುತ್ತಿತ್ತೇನೋ, ಅಲ್ವಾ?

ಚಂದದ ಬರಹ.

ರೇಶ್ಮಾ ಎನ್ said...

ಧನ್ಯವಾದಗಳು ರಂಜಿತ್..:)

ನವಿಲುಗರಿ ಹುಡುಗ said...

ನವಿಲ್ಗರಿ ಜಗಳ ನವಿಲ್ಗರಿಯಷ್ಟೇ ಮೃಧುವಾಗಿ ಮುಗಿದಿದ್ದು ಓದಿ ಖುಷಿ ಆಯ್ತು...ಮತ್ತೆ ಬರಹ ನವಿಲ್ಗರಿಯಷ್ಟೆ ಮುದ್ ಮುದ್ದಾಗಿದೆ..

ಇಂತಿ
ನವಿಲ್ಗರಿ ಹುಡ್ಗ !

ASHRAF said...

ತುಂಬಾ ಚೆನ್ನಾಗಿದೆ. ಹೀಗೆಯೇ ಬರೆಯುತ್ತಿರಿ