11:02 PM

ಬಣ್ಣದ ಸೀರೆ

ಝೋಪಡಿಯೊಳಗಿನ ಆ ಸೀರೆಗೆ
ಹಲವು ಬಣ್ಣಗಳು
ಉಟ್ಟು ಬಿಟ್ಟ ಯಾರೋ ಕೊಟ್ಟ ಸೀರೆಗೆ
ವಾರಸುದಾರಳು ಅವಳು

ಯಾರ್ ಯಾರದೋ ಮನೆಯ
ಕಸ ಮುಸುರೆ ಮಾಡಿ
ತನ್ನ ಹೊಟ್ಟೆ ಕಟ್ಟಿ ಮನೆ ಸಾಕುವ
ಆಕೆ ಮಹಾ ತಾಯಿ

ಪಕ್ಕದ ಮನೆ ದೀಪಾವಳಿ ಬೆಳಕಲ್ಲಿ
ಹೊಳೆಯುವ ಹೊಂಬಣ್ಣದ ಸೀರೆ
ಹೋಳಿಯ ಬಣ್ಣ ಬಳಿದುಕೊಂಡ
ಕಂದನ ಮೈಯ ವರ್ಣಧಾರೆ

ಕುಡಿದ ಗಂಡನ ಬಡಿತಕ್ಕೆ ಬಿದ್ದಾಗ
ಅದಕ್ಕೆ ನೆಲದ ಮಣ್ಣು ಬಣ್ಣ
ನೋವು ಕಣ್ಣೀರಾಗಿ ಹರಿದಾಗ
ಎಲ್ಲ ತೊಯ್ದು ಶುಭ್ರ ಬಿಳಿ ಬಣ್ಣ

ತನ್ನಂತೆ ದುಡಿದು ಮರಗಟ್ಟಿ ಹೋದ
ತಾಯ ನೆನಪಿನ ಬಣ್ಣ ಅದು
ಕನಸೇ ಮರೆತು ಹೋದ ಕಣ್ಣಿನ ಬಣ್ಣ
ಅವಳ ಆ ಪುಟ್ಟ ಜಗತ್ತಿನ ಬಣ್ಣ ಅದು