4:23 AM

ಅಮ್ಮಾ ಎಂದರೆ...


ಎಂದೂ ಬತ್ತದ ಪ್ರೀತಿಯ ಸಾಗರ
ಅಮ್ಮನ ಈ ಮಡಿಲು
ಸರಿಸಮವಿಹುದೇ ಅದರೆದುರು
ತುಂಬಿದ ಆ ಕಡಲು
ಬಾಯಲಿ ಹೇಳಲು ಕೈಯಲಿ ತೋರಲು
ಅಮ್ಮನ ಪ್ರೀತಿಯು ಮಿತಿಯೇನು?
ಅಳೆಯಲು ಹೋದರೆ ಜಗದಲಿ ಅದನು
ತೂಗುವ ತಕ್ಕಡಿಯಿದೆಯೇನು?
ಕೈಯಲಿ ಕಾಲಲಿ ತಲೆಯಲಿ ತನ್ನಯ
ಎದೆಯನು ಗುದ್ದುವ ಮಗುವನ್ನು
ಮುದ್ದಿಸಿ ಪ್ರೀತಿಲಿ ಹಾಲುಣಿಸುವಳು
ಮರೆಯುತ ತನ್ನಯ ನೋವನ್ನು
ಮಗುವಿನ ಕೂಗಿಗೆ ಕಿವಿಯಾಗುವಳು
ಗೆಲುವಲಿ ನಗುವಲಿ ತಾನೂ ನಗುವಳು
ಮಗುವಿನ ಕಣ್ಣೊಳಗಾಕೆಯ ಕನಸು
ಅಂತಹ ತಾಯಿಯ ಪಾದಕೆ ನಮಿಸು

ಅಮ್ಮ , ನಿನ್ನ ನಿಷ್ಕಲ್ಮಶ ಪ್ರೀತಿಗೆ ಸಾಟಿಯಿಲ್ಲ. ಈ ಹದಿನಾರು ಸಾಲುಗಳಲ್ಲಿ ನಿನ್ನನ್ನು ವರ್ಣಿಸುವಷ್ಟು ತಾಕತ್ತು ನನಗಿಲ್ಲ. ಜನ್ಮ ಕೊಟ್ಟಿದ್ದಕ್ಕೆ, ಪ್ರೀತಿ ನೀಡಿದ್ದಕ್ಕೆ, ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದ್ದಕ್ಕೆ, ಸದಾ ಜೊತೆಗೆ ನಿಂತಿದ್ದಕ್ಕೆ, ನನ್ನ ಮೇಲಿಟ್ಟಿರುವ ನಂಬಿಕೆಗೆ ಹಾಗು ಮತ್ತೆಲ್ಲದ್ದಕ್ಕೂ ಚಿರರುಣಿ. ಇಂದು ಮೇ ೮, ಅಮ್ಮಂದಿರ ದಿನ. ಇದನ್ನು ಬರೆಯುತ್ತಿರುವಾಗ ನೀನು ಅಜ್ಜಿ ಮನೆಯಲ್ಲಿದ್ದೀಯ . I miss u mom... I love u.. ನೀನು ಇಲ್ಲದೇ ಇದ್ದರೂ ಮನೆಯ ಕೆಲಸಗಳೇನೋ ನಡೆಯತ್ತವೆ. ಆದರೆ ಮನಸ್ಸು ಮಾತ್ರ ಬಿಕೋ.. ಅನ್ನುತ್ತದೆ. "ನೀನೆ ಜಡೆ ಹಾಯ್ಕೋ. ಇಷ್ಟು ದೊಡ್ಡ ಆಯ್ದೆ. ಇನ್ನು ಜಡೆ ಹಾಕುಲೆ ಬತ್ತಿಲ್ಲೆ ಅಂದ್ರೆ ಯಾರಾದ್ರೂ ನಗಾಡ್ತೊ. ನಾಳೆಯಿಂದ ನಾನಂತೂ ಹಾಕ್ಕೊಡತ್ನಿಲ್ಲೆ." ಅನ್ನುವ ಅಮ್ಮ, ಮಾರನೇ ದಿನ ಬೆಳಿಗ್ಗೆ ಶಾಲೆಗೆ ಹೊರಡುವ ಗಡಿಬಿಡಿಯಲ್ಲೇ ನನಗಾಗಿ ಪುರುಸೊತ್ತು ಮಾಡಿಕೊಂಡು " ಬೇಗ ಬಾ.. ಜಡೆ ಹಾಕೀಕೆ ನಡೆತೆ" ಅನ್ನುವ ಮಗು ಮನಸ್ಸಿನ ಅಮ್ಮ ಮನೆಯಲ್ಲಿಲ್ಲದೆ ಇದ್ರೆ ದಿನದ ಸೂರ್ಯೋದಯ, ಸೂರ್ಯಾಸ್ತ ಎಲ್ಲ ವ್ಯರ್ಥ ಅನಿಸುತ್ತದೆ. ಮಕ್ಕಳ ತಾಯಂದಿರು, "ಟೀಚರ್, ನನ್ಮಗ/ ನನ್ಮಗಳು ನೀವ್ ರಜೆ ಮಾಡಿದ್ ದಿನ ಶಾಲೆಗೆ ಬತ್ತಿಲ್ಲ ಅಂತ್ರ್" ಅನ್ನುವುದನ್ನು ಕೇಳುವಾಗ ನಿನ್ನ ಬಗ್ಗೆ ಹೆಮ್ಮೆ ಅನಿಸುತ್ತೆ. ಜೊತೆಗೆ ನನಗಿಂತ ಹೆಚ್ಚು ಸಮಯ ನಿನ್ನ ಜೊತೆ ಕಳೆಯೋ ಆ ಮಕ್ಕಳ ಬಗ್ಗೆ ಸಣ್ಣ ಅಸೂಯೆ ಕೂಡಾ.. ಗೆಳತಿಯರು "ನಿನ್ ಅಮ್ಮ ಮನೇಲಿ ಅಷ್ಟು ಬೇಗ ಎದ್ದು ಅಡಿಗೆ ಎಲ್ಲ ಮುಗಿಸಿ ಶಾಲೆಗೆ ಹೋಗಿ ಬರ್ತಾರಲ್ಲ, Great" ಅಂದಾಗ ಕಣ್ಣಲ್ಲಿ ಮಿಂಚು ಮೂಡುತ್ತದೆ.
"ನನ್ನ ಮಗಳು ಪ್ರೈಝ್ ತಗೊಂಡಿದಾಳೆ" ಅಂತ ನೀನು ಸಂಬಧಿಕರೆದುರು ಹೇಳುವಾಗ ಅರಳುವ ನಿನ್ನ ಮುಖ ನನಗೆ ಗೆಲುವಿಗಿಂತ ಹೆಚ್ಚಿನ ಖುಶಿ ನೀಡುತ್ತದೆ. ಇನ್ನೂ ಏನೇನೋ ಹೇಳುವುದಿದೆ ಅಮ್ಮ.... ನೀನು ಎದುರಿಗಿರುವಾಗ ಯಾವತ್ತೂ ಹೇಳಲಾಗದ್ದು.. ನಿನ್ನ ಬಳಿ ಹೇಳದೆ ಮುಚ್ಚಿಟ್ಟಿದ್ದು.. ಭಾವನೆಗಳು ಶಬ್ದ ರೂಪಕ್ಕೆ ಅಥವಾ ಅಕ್ಷರ ರೂಪಕ್ಕೆ ಬದಲಾದರೆ ತನ್ನ ನವುರನ್ನು ಕಳೆದುಕೊಂಡುಬಿಡುತ್ತೇನೋ ಅನ್ನೋ ಭಯ.. ಅಮ್ಮ ನೀನು ಸದಾ ಖುಶಿಯಾಗಿರ್ಬೇಕು ಅನ್ನೋದೆ ನನ್ನ ಆಸೆ. ನಿನ್ನ ಬಿಟ್ಟಿರೋದು ತುಂಬಾ ಕಷ್ಟ ಆಗ್ತಿದೆ. ಬೇಗ ಬಂದ್ಬಿಡ್ತೀಯಲ್ಲ...

4:21 AM

ಗೆಳೆಯ ಬಂದನು ಊರಿಗೆ..

ಕೊಟ್ಟ ಮಾತಿನ ಪ್ರಕಾರ ಹೋಗಿ ಒಂದು ತಿಂಗಳ ಬಳಿಕ ರಜೆ ಹಾಕಿ ಮತ್ತೆ ಬಂದಿದ್ದ ಅವನು. ಮನೆಯಲ್ಲಿ ಒಪ್ಪಿಗೆ ಪಡೆದು ಅವನೊಡನೆ ನದಿ ತೀರಕ್ಕೆ ಹೋದವಳು ಅಲ್ಲಿಯೇ ಕುಳಿತು ದಡದಲ್ಲಿದ್ದ ಕಲ್ಲುಗಳನ್ನು ಹೆಕ್ಕಿ, ಒಂದೊಂದಾಗಿ ನೀರಿಗೆ ಬಿಸಾಡುತ್ತಾ ಒಮ್ಮೆ ಅವನತ್ತ ನೋಡಿ ದೀರ್ಘವಾಗಿ ಉಸಿರೆಳೆದುಕೊಂಡು ಮಾತು ಶುರು ಮಾಡಿದಳು. "ನೀನು ಅಲ್ಲಿ ಬಂದೂಕು ಹಿಡಿದು ಹೋರಾಡುತ್ತಿದ್ದರೆ ನಾನು ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಕೂತಿದ್ದೆ. ಕ್ಷಣಕ್ಷಣವೂ ಏನಾಗುತ್ತೋ ಅಂತ ಆತಂಕ. ಎದೆಯ ಡಬ್ ಡಬ್ ಸದ್ದು ನಂಗೇ ಕೇಳಿಸುವಷ್ಟು ಜೋರಾಗಿತ್ತು. ಹೊಟ್ಟೆಗೆ ಏನು ತಿನ್ನುತ್ತಿದ್ದೆನೋ, ಕುಡಿಯುತ್ತಿದ್ದೆನೋ ನನಗೇ ಗೊತ್ತಿರಲಿಲ್ಲ. ನಿನಗೇನೂ ತೊಂದರೆ ಆಗದಿರಲಿ ಅಂತ ದೇವರೆದುರು ತುಪ್ಪದ ದೀಪ ಹಚ್ಚಿಟ್ಟು ನಂದದಂತೆ ಕಾಯುತ್ತಾ ಕೂತಿದ್ದೆ. ವಾರದ ಹಿಂದೆ ಮದರಂಗಿ ಹಚ್ಚಿಕೊಂಡಿದ್ದ ಕೈಗಳು ಗಡಗಡನೆ ನಡುಗುತ್ತಿದ್ದವು. ಟಿ.ವಿ. ಮುಂದೆ ಕೂರುವದಕ್ಕೂ ಧೈರ್ಯವಾಗ್ತಿರಲಿಲ್ಲ. "
" ಒಬ್ಬ ಸೈನಿಕನನ್ನು ಮದ್ವೆಯಾಗೋದಕ್ಕೆ ತುಂಬಾ ಧೈರ್ಯ ಬೇಕು ನಿಜ. ಯಾಕಂದ್ರೆ ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು. ಆದರೆ ನನಗೆ ನಿನ್ನ ಪ್ರೀತಿಸುವಾಗ ಇದ್ದ ಧೈರ್ಯ ಬತ್ತಿ ಹೋಗಿತ್ತು. ಹೆಚ್ಚು ದಿನ ರಜಾ ಸಿಗೋದಿಲ್ಲ, ಇನ್ನೊಂದು ತಿಂಗಳು ಬಿಟ್ಟು ಬರ್ತೀನಿ ಅಂತ ಹೇಳಿ ಹೋಗಿದ್ದ ನೀನು ಬರೋದೇ ಇಲ್ವೇನೋ ಅಂತ ಹೆದರಿ ರಾತ್ರಿಯೆಲ್ಲ ಕಣ್ಮುಚ್ಚುತ್ತಿರಲಿಲ್ಲ. ಅಪ್ಪ, ಅಮ್ಮ, ತಂಗಿ ಎಲ್ಲರೂ ಗಾಬರಿಯಾಗಿದ್ರು. ನಿನಗೆ ಗುಂಡಿನ ಸದ್ದೇ ಸುಪ್ರಭಾತ, ರಾತ್ರಿ ಅದೇ ಜೋಗುಳ. ಸಾವಿನ ಮನೆಯ ಪಕ್ಕದ ಸಣ್ಣ ಓಣಿಯಲ್ಲೇ ನಡೆಯುವವನು ನೀನು. ಆದ್ರೆ ನಂಗೆ ಇದೆಲ್ಲಾ ಹೊಸತು. ನಿನ್ನ ದನಿಯನ್ನು ಮತ್ತೆ ಕೇಳ್ತೀನೋ ಇಲ್ವೋ ಅಂತ ಆತಂಕ. ಹ್ರದಯ ಒದ್ದಾಡುತ್ತಿತ್ತು. ಕೊನೆಗೂ ಯುದ್ಧ ಮುಗಿದ ಸುದ್ದಿ ತಿಳಿದಾಗ ಮನಸ್ಸಿಗೆ ನೆಮ್ಮದಿ. ಜ್ವರ ಬಿಟ್ಟ ಮಗುವಿನ ಲವಲವಿಕೆ. ಅವತ್ತು ಸಂಜೆ ನೀನು ಫೋನ್ ಮಾಡಿದ್ಯಲ್ಲ.. ನಿನ್ನ ಮಾತು ಕೇಳಿದ ಖುಶಿಯಲ್ಲಿ ನನ್ನ ಕೊರಳಿಂದ ಸ್ವರವೇ ಹೊರಡಲಿಲ್ಲ. ಅಮ್ಮಂಗೆ ಫೋನ್ ಕೊಟ್ಟುಬಿಟ್ಟೆ. ಅವತ್ತು ಅಮ್ಮ ದೇವರಿಗೆ ಪಾಯಸ ನೈವೇದ್ಯ ಮಾಡಿದ್ಳು. " ಹೇಳಿ ಮುಗಿಸಿ ಅವನೆಡೆಗೆ ನೋಡಿದಳು. ಅವಳು ಮಾತಾದಾಗೆಲ್ಲ ಅವನು ಮೌನ. " ನೀ ಯಾಕೆ ಸುಮ್ಮನಿರ್ತೀಯಾ?" ಅಂತ ಅವಳೊಮ್ಮೆ ಕೇಳಿದ್ದಳು. ಆಗ ಅವನು "ನೀ ಮಾತಾಡ್ತಿದ್ದರೆ ಕೇಳ್ತಾನೇ ಇರ್ಬೇಕು ಅನಿಸತ್ತೆ. ಮಾತಾಡು" ಅಂದಿದ್ದ.
ಅವನು ಅವಳನ್ನೇ ನೋಡುತ್ತಾ ಕುಳಿತಿದ್ದ. ಅವಳು ಅವನೆಡೆಗೆ ತುಂಟ ನಗು ಬೀರುತ್ತಾ, "ನಿನಗೆ ನನ್ನ ನೆನಪಾಗಲಿಲ್ಲ್ವ?" ಕೇಳಿದಳು. "ತುಂಬಾ ನೆನಪು ಮಾಡಿಕೊಂಡೆ. ಜೀವನದಲ್ಲಿ ಮೊದಲ ಸಲ ಹೋರಾಡುವಾಗ ಹೆದರಿಕೆಯಾಗಿತ್ತು" ಅಂದ. ಅವನನ್ನೇ ಕಣ್ತುಂಬಿಕೊಳ್ಳುತ್ತಾ ಕುಳಿತಿದ್ದವಳು, "ಅಕ್ಕ" ಅಂತ ಕರೆದಿದ್ದು ಕೇಳಿ ಹಿಂದಿರುಗಿ ನೋಡಿದಳು. ಅಲ್ಲಿ ನಿಂತಿದ್ದ ತಂಗಿ, "ಅಮ್ಮ ಹೇಳಿದ್ರು, ಕತ್ತಲಾಯ್ತು.. ಬರಬೇಕಂತೆ" ಅಂದಳು. ಅದಾಗಲೇ ಚಂದ್ರ ಬಾನಿನಲ್ಲಿ ಮೂಡಿ ಬಂದಾಗಿತ್ತು. "ನಿನ್ನ ಜೊತೆ ಇದ್ರೆ ಸಮಯ ಹೋಗಿದ್ದೇ ಗೊತ್ತಾಗಲ್ಲ." ಹೇಳಿದಳು. "ನಂಗೂ ಅಷ್ಟೇ" ನಗುತ್ತಾ ಹೇಳಿದ ಅವನು. ಬಟ್ಟೆಗೆ ಮೆತ್ತಿದ್ದ ಧೂಳು ಕೊಡವಿಕೊಳ್ಳುತ್ತಾ ಇಬ್ಬರೂ ಎದ್ದು ನಿಂತರು.

2:50 AM

ಅಮ್ಮನ ಸೀರೆ

ಅಮ್ಮನ ಸೀರೆಯಿದು
ಅಮ್ಮನ ಕೈಯ
ಮೆತ್ತನೆ ಸ್ಪರ್ಶವಿದೆ ಅದರಲ್ಲಿ
ಆಟಕ್ಕೆಂದು ನನ್ನ
ಪುಟ್ಟನೆ ಗೊಂಬೆಯ ಸಹ
ಸುತ್ತಿ ಮಲಗಿಸಿದ್ದೆ ಅದರಲ್ಲಿ

ಡ್ಯಾನ್ಸಿಗೆ ಸೀರೆ ಉಟ್ಟು
ಕನ್ನಡಿ ಮುಂದೆ ನಿಂತಾಗ
ಮೈಯಲ್ಲಿ ಹೊಸ ತರದ ಪುಳಕ
ಅಮ್ಮನಿಗೆ ಕಾಣದಂತೆ
ಮತ್ತೆ ಮತ್ತೆ ಕದ್ದು ಮುಚ್ಚಿ
ಸೀರೆ ಉಡುವ ತವಕ

ತಪ್ಪು ತಪ್ಪಾಗಿ ತಿರುಗಿಸಿ
ಉಟ್ಟ ಸೀರೆ ಬಿಚ್ಚಿ ಬಿದ್ದಾಗ
ಮುಖದಲ್ಲೊಂದು ಪೆಚ್ಚು ನಗೆ
ಆದರೂ ಬಿಡದೆ ಮತ್ತೆ ಸೀರೆ ಉಟ್ಟು
ಅಮ್ಮನದೇ ನೋಟ, ನಡಿಗೆ
ನಾನೇ ಅಮ್ಮನಾದ ಹಾಗೆ

ಅಮ್ಮನ ಸೀರೆಯಲ್ಲಿ ಇನ್ನೂ
ಹಿತವಾದ ಸುಖ, ಸಾಂತ್ವನವಿದೆ
ಎಂದು ಅರಿವಾದಾಗ ಹನ್ನೆರಡು ವರ್ಷ
ಅಮ್ಮನ ಪ್ರೀತಿ, ಆರ್ದ್ರತೆ,
ಕನಸು, ನೋವು, ತಾಳ್ಮೆ ಎಲ್ಲ
ತಿಳಿಯುವಾಗ ಹದಿನೆಂಟು ವರ್ಷ

ಈಗ ಅಮ್ಮನ ಸೀರೆ
ಸ್ವಲ್ಪ ಹಳತಾಗಿದೆ
ಆದರೆ ಆ ಹಿತವಾದ ಸ್ಪರ್ಶ
ಇನ್ನೂ ಹೆಚ್ಚು ಮೆಚ್ಚಾಗಿದೆ .

1:56 AM

ಅವಳೇ ಇವಳು?

ಅವಳು ಮೊನ್ನೆ ಬಟ್ಟೆಯಂಗಡಿಯಲ್ಲೂ ಸಿಕ್ಕಿದ್ದಳು. ಅವಳನ್ನು ಕಂಡಿದ್ದೇ ನಂಗೆ ಪರಿಚಿತ ಮುಖ ಅನ್ನಿಸಿತು. ಮತ್ತೆ ಮತ್ತೆ ಪ್ರಯತ್ನಿಸಿ ನೆನಪು ಮಾಡಿಕೊಂಡೆ. ’ಹೌದು, ಅವಳೇ ಇವಳು’ ಅನಿಸಿತು. ’ಅಲ್ಲದೇನೂ ಇರಬಹುದು’ ಮತ್ತೊಂದು ಮನಸ್ಸು ಹೇಳಿತು. ನನ್ನ ಜೊತೆ ೧ ನೇ ಕ್ಲಾಸ್ ನಲ್ಲಿ ಕಲೀತಿದ್ದವಳು. ನಂತರ ನಾವು ಬೇರೆ ಊರಿಗೆ ಹೋಗಿದ್ದರಿಂದ ಅವಳ ಜೊತೆ ಸಂಪರ್ಕ ಇರಲಿಲ್ಲ. ನಾವು ಭೇಟಿಯಾಗದೇ ೧೨ ವರ್ಷಗಳಾಗಿದ್ದವು. ಮೊದಲಿಗಿಂತ ಎತ್ತರವಾಗಿದ್ದಳು. ದಪ್ಪವಾಗಿದ್ದಳು. ಆದರೆ ಅವಳ ಮುಖದ ಮೇಲಿನ ಆ ಕಪ್ಪು ಮಚ್ಚೆ ನೋಡಿದ ಮೇಲೆ ನಂಗೆ ಯಾವ ಅನುಮಾನವೂ ಉಳಿದಿರಲಿಲ್ಲ. ’ಗುರುತು ಸಿಕ್ಕಿಲ್ಲದಿರಬಹುದು’ ಅನ್ನಿಸಿ ನನ್ನತ್ತಲೇ ನೋಡಿದ ಅವಳನ್ನು ನೋಡಿ ಚಿಕ್ಕದಾಗಿ ನಕ್ಕೆ. ಅವಳೂ ನಕ್ಕಳು. ಅಥವಾ ನಂಗೆ ಹಾಗನಿಸಿತು. ನಾನು ಅವಳ ಕಡೆಗೇ ನೋಡುತ್ತಿದ್ದೆ. ಅವಳು ೨-೩ ಬಾರಿ ನನ್ನೆಡೆಗೆ ನೋಡಿದಳು. ತುಟಿಯಂಚಿನಲ್ಲೇ ನಕ್ಕಳು. ಅವಳು ಓರೆ ನೋಟದಿಂದ ನನ್ನತ್ತ ಗಮನಿಸುತ್ತಿದ್ದಾಳೆ ಅಂತ ನನಗನಿಸುತ್ತಿತ್ತು. ಗುರುತು ಹಿಡಿದು ಈಗ ಅವಳಾಗೇ ಮಾತಾಡಿಸುತ್ತಾಳೆ ಅಂತ ಕಾದಿದ್ದೇ ಬಂತು. ಅವಳು ಬಟ್ಟೆ ಪ್ಯಾಕ್ ಮಾಡಿಸಿಕೊಂಡು ಕೌಂಟರಿನಲ್ಲಿ ದುಡ್ಡು ಕೊಟ್ಟು ಹೊರಟೇ ಬಿಟ್ಟಳು. ಆಗ ಒಂದು ಕ್ಷಣ ನನ್ನ ಮನಸ್ಸಿನಲ್ಲಿ ’ಇವಳು ಅವಳ ಹಾಗೇ ಇರುವ ಬೇರೆ ಯಾರೋ ಆಗಿರಬಹುದೇ?’ ಅನ್ನಿಸಿತು. ಹಾಗಾಗಿ ನಾನಾಗೇ ಮಾತನಾಡಿಸಲು ಹೋಗದೆ ಸುಮ್ಮನಿದ್ದು ಬಿಟ್ಟೆ.

ಇಂದು ಈ ಜಾತ್ರೆಯ ಜನಸಂದಣಿಯಲ್ಲಿ ಅವಳ ಮುಖ ಕಾಣಿಸಿದ ಮೇಲೆ ’ಇವಳು ನನ್ನ ಆ ಬಾಲ್ಯದ ಗೆಳತೀನೇ’ ಅನ್ನೋ ಭಾವನೆ ಮನಸ್ಸಿನಲ್ಲಿ ಮೂಡಿ, ನನ್ನ - ಅವಳ ಭೇಟಿ ದೈವ ನಿಶ್ಚಯ ಅನ್ನಿಸಿಬಿಟ್ಟಿತು. ಅವಳನ್ನು ಮಾತನಾಡಿಸಲೇ ಬೇಕೆಂಬ ಉತ್ಕಟ ಹಂಬಲ ತಡೆಯಲಾರದೇ ಅವಳು ನಿಂತಿದ್ದ ಬಳೆಯಂಗಡಿಯಕಡೆ ನೋಡುತ್ತಾ ನಿಂತೆ. ರಥದ ಎದುರು ನಿಂತು ಇನ್ನೆಲ್ಲೋ ನೋಡುತ್ತಿದ್ದ ನನ್ನನ್ನು ಕಂಡ ಅಮ್ಮ ’ಏನೇ?’ ಅಂತ ಕಣ್ಣಲ್ಲೇ ಪ್ರಶ್ನಿಸಿದರು. ’ಈಗ ಬಂದೆ. ಇಲ್ಲೇ ಇರು’ ಅನ್ನುತ್ತಾ ಆ ಜನ ಸಂದಣಿಯ ನಡುವೆ ದಾರಿ ಮಾಡಿಕೊಂಡು ಅವಳು ನಿಂತಿದ್ದ ಬಳೆಯಂಗಡಿ ಸಮೀಪಿಸಿ, ಸಲಿಗೆಯಿಂದ ಅವಳ ಬೆನ್ನ ಮೇಲೆ ಕೈಯಿಟ್ಟು, ’ಹಾಯ್’ ಎಂದೆ. ಫಕ್ಕನೆ ಹಿಂದೆ ತಿರುಗಿದ ಅವಳು ನನ್ನತ್ತ ಅಪರಿಚಿತರನ್ನು ನೋಡುವ ನೋಟ ಬೀರಿದಳು. ನಾನು ನಗುತ್ತಾ, ’ಗುರುತು ಸಿಗಲಿಲ್ವ? ನಾನು ಕಣೇ.. ೧ ನೇ ಕ್ಲಾಸ್ ನಲ್ಲಿ ನಿನ್ನ ಪಕ್ಕ ಕುಳಿತುಕೊಳ್ತಿದ್ನಲ್ಲ’ ಅಂದೆ. ನಿಜವಾಗಿಯೂ ನೆನಪಾಯಿತೋ, ಅಥವಾ ಸುಮ್ಮನೆ ಹಾಗೆ ನಟಿಸಿದಳೋ.. ’ಓಹ್.. ಹಾಂ.. ಗೊತ್ತಾಯ್ತು’ ಅಂದಳು. ’ಚೆನ್ನಾಗಿದಿಯಾ?’ ಕೇಳಿದೆ. ’ಹೂಂ’ಅಂದಳು. ’ಈಗ ಇದೇ ಊರಿನಲ್ಲಿದ್ದೀಯಾ?’ ಕೇಳಿದೆ. ’ಹುಂ.. ಹುಂ’ ಅಂದಳು. ’ಮನೇಲಿ ಎಲ್ಲ ಆರಾಮಿದ್ದಾರ?’ ಕೇಳಿದೆ. ಅದಕ್ಕೂ ’ಹುಂ’ ಅಂದಳು. ’ಏನು ಓದ್ತಿದ್ದ್ದಿಯ?’ ಕೇಳಿದೆ. ’ಓದು ನಿಲ್ಲಿಸಿಬಿಟ್ಟೆ. ಕೆಲಸಕ್ಕೆ ಹೋಗ್ತಿದೀನಿ.’ ಅಂದಳು. ’ ನಿನ್ನ ತಮ್ಮ ಏನ್ ಮಾಡ್ತಿದ್ದಾನೆ?’ ಕೇಳಿದೆ. ’ತಮ್ಮ ಅಲ್ಲ, ತಂಗಿ.. ೧೦ ನೇ ಕ್ಲಾಸ್ ಅವಳು’ ಅಂದಳು. ’ಅರೇ.. ಇವಳಿಗೆ ತಮ್ಮ ಇದ್ದಿದ್ದಲ್ವಾ’ ಅಂದುಕೊಂಡವಳು, ನನ್ನ ನೆನಪೇ ಸರಿಯಿಲ್ಲವೇನೋ ಅಂತ ಸಮಾಧಾನ ಮಾಡಿಕೊಂಡೆ. ಅವಳ ಚುಟುಕಾದ ಉತ್ತರಗಳಿಂದ, ಅವಳಿಗೆ ನನ್ನ ಹತ್ತಿರ ಮಾತಾಡುವುದು ಇಷ್ಟವಿಲ್ಲವೇನೋ ಅನಿಸಿ, ’ಸರಿ ಹಾಗಾದ್ರೆ. ಇನ್ನೊಮ್ಮೆ ಸಿಗೋಣ. ನಮ್ಮನೆಗೆ ಬಾರೇ ಒಮ್ಮೆ.’ ಅಂದೆ. ಅವಳು ತುಟಿಯಂಚಿನಲ್ಲಿ ನಗು ಬೀರುತ್ತಾ ’ಖಂಡಿತ.. ಬಾಯ್’ ಅಂತ ಶುಭ ವಿದಾಯ ಹೇಳಿದಳು. ಅವಳು ಸೌಜನ್ಯಕ್ಕಾದರೂ ನನ್ನ ಬಗ್ಗೆ ಏನೂ ವಿಚಾರಿಸದಿದ್ದುದು ನಂಗೆ ಆಶ್ಚರ್ಯ ಹುಟ್ಟಿಸಿತಾದರೂ, ನಾನಾಗೇ ಏನೂ ಹೇಳಲಿಲ್ಲ. ವಿದಾಯ ಹೇಳಿ ಆ ರಶ್ ನಲ್ಲೇ ಮಧ್ಯೆ ಸ್ಥಳ ಮಾಡಿಕೊಳ್ಳುತ್ತಾ, ಅಮ್ಮನ ಬಳಿ ಬಂದು ನಿಂತೆ. ’ಯಾರದು?’ ಕೇಳಿದಳು ಅಮ್ಮ. ’ನನ್ನ ಹಳೆ ಫ್ರೆಂಡ ಅವಳು’ ಅಂದೆ. ’ ರಥವನ್ನು ನೋಡುತ್ತಾ ಅಮ್ಮ, ’ಅಲ್ನೋಡೆ. ರಥದ ತುದಿಯನ್ನ’ ಅಂದರು. ಕತ್ತೆತ್ತಿ ರಥದ ತುದಿಯನ್ನು ದಿಟ್ಟಿಸಿದೆ. ನಂಗೆ ಅಲ್ಲಿ ಅವಳ ಮುಖವೇ ಕಾಣಿಸ್ತಿತ್ತು.

6:27 AM

ಹೂವ ಹಾದಿಯ ಬೆಂಕಿ ಮುಳ್ಳು

ಅಪ್ಪಂಗೂ ನಂಗೂ ಮಾತಿಲ್ಲದೆ ೪-೫ ದಿನಗಳಾಗಿದ್ದವು. ಯಾವತ್ತೂ ಹೀಗಿರಲಿಲ್ಲ ಅಪ್ಪ. ನಂಗೆ ದೊಡ್ಡ ದನಿಯಲ್ಲಿ ಜೋರು ಮಾಡಿದವರೂ ಅಲ್ಲ. ನಾನು ಹೇಳಿದ್ದಕ್ಕೆಲ್ಲ ಹೂಂ ಗುಟ್ಟುತ್ತ , ನನ್ನ ಪ್ರತಿ ಮಾತಿಗೂ ಪ್ರೋತ್ಸಾಹ ಕೊಡುತ್ತ ನನ್ನನ್ನು ಸಮರ್ಥಿಸ್ತಿದ್ದರು. ಅಪ್ಪನ ಜೊತೆ ನಾನು ಎಷ್ಟೆಲ್ಲ ವಿಷಯಗಳನ್ನು ಮಾತಾಡ್ತಿದ್ದೆ. ನಾನು ಕಟ್ಟಿಕೊಂಡ ಕಲ್ಪನೆಯ ಆದರ್ಶಗಳ ಬಗ್ಗೆನೂ ಹೇಳ್ತಿದ್ದೆ. ಅವರು ನನ್ನ ಯಾವ ಮಾತನ್ನೂ ವಿರೋಧಿಸ್ತಿರಲಿಲ್ಲ. ನನ್ನ ಅಭಿಪ್ರಾಯಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ನನ್ನ ಕಲ್ಪನೆಯ ಹೂವಿಗೆ ವಾಸ್ತವದ ಬಿಸಿ ತಾಗಿ ಅದು ಬಾಡುವುದು ನಂಗೆ ಬೇಕಿರಲಿಲ್ಲ. "ನಾನು ಹೇಳಿದ್ದಕ್ಕೆಲ್ಲ ಅಪ್ಪ ಒಪ್ಪಬೇಕು, ಒಪ್ತಾರೆ " ಅಂದ್ಕೊಂಡಿದ್ದೆ.
ಏಕಾಏಕಿ ಹೀಗಾದಾಗ ನಂಗೆ ತುಂಬಾ ಬೇಸರವಾಗಿತ್ತು. ಅಪ್ಪನ ಬಗ್ಗೆ ಯಾವತ್ತೂ ಇಲ್ಲದ ಸಿಟ್ಟು ಬಂದಿತ್ತು. ಸಮಾಜಕ್ಕೆ, ಸಂಪ್ರದಾಯಗಳಿಗೆ ಹೆದರಿ ಅಪ್ಪ ನನ್ನ ಪರ ವಹಿಸ್ತಿಲ್ಲ ಅನ್ನೋ ಕಾರಣ ನನ್ನ ರೋಷಕ್ಕೆ ಇನ್ನಷ್ಟು ತುಪ್ಪ ಸುರಿದಿತ್ತು. ಯಾರಿಗೂ ಹೇಳದೆ ಮನೆ ಬಿಟ್ಟು ಹೋಗ್ಬಿಡಬೇಕು ಅಂದ್ಕೊಂಡೆ. ಆದ್ರೆ ಅದು ನನ್ನಿಂದ ಸಾಧ್ಯವಾ? ಖಂಡಿತಾ ಇಲ್ಲ ಅನಿಸ್ತು. ನಾನು ಯಾರ ಮೇಲಾದರೂ, ಹೇಗಾದರೂ ಸಿಟ್ಟು ಹೊರಹಾಕಿ ಶಾಂತವಾಗಬೇಕಿತ್ತು. ಅಂಗಳದಲ್ಲಿದ್ದ ಕಲ್ಲನ್ನೆಲ್ಲ ಹೆಕ್ಕಿ ಬೀಸಿ ಬೀಸಿ ಒಗೆಯುತ್ತಾ ಕುಳಿತೆ.

ಅಪ್ಪ ನನ್ನ ಜೊತೆ ಮಾತು ಬಿಟ್ಟಿದ್ದಷ್ಟೇ ಅಲ್ಲ, ನನ್ನ ಎದುರು ಬರುವುದನ್ನೇ ಕಡಿಮೆ ಮಾಡಿದ್ದರು. ಅಕಸ್ಮಾತ್, ಎದುರು ಬಂದರೂ ಯಾವುದೋ ವೈರಿಯನ್ನು ನೋಡಿದಂತೆ ನೋಡಿ ಹೊರಟು ಹೋಗ್ತಿದ್ದರು. ಅಮ್ಮನಂತೂ ಹೆಚ್ಚು ಮಾತೇ ಆಡ್ತಿರಲಿಲ್ಲ. ಯಾವಾಗಲೂ ಪಟ ಪಟ ಅಂತ ಮಾತಾಡ್ತಿರ್ತಿದ್ದ ಅಮ್ಮ ಹೀಗೆ ಮೌನವಾಗಿರುವುದಕ್ಕೆ ನಾನೇ ಕಾರಣ ಅನ್ನೋ ಗಿಲ್ಟ್ ಒಳಗೊಳಗೇ ಕಾಡ್ತಿತ್ತು. ಆದರೂ ನಾನು ಹಠ ಬಿಟ್ಟಿರಲಿಲ್ಲ. ನಾನೂ ಅಪ್ಪನ ಮಗಳಲ್ಲವಾ? ನಾನಾಗೇ ಯಾಕೆ ಮಾತಡಿಸಲಿ? ಯಾಕೆ ತಪ್ಪು ಅಂತ ಒಪ್ಪಿಕೊಂಡು ಕ್ಷಮೆ ಕೇಳಲಿ? ಅದು ego ನಾ, ಸ್ವಾಭಿಮಾನನಾ? ಅಥವಾ ದಿಟ್ಟ ನಿರ್ಧಾರಗಳಿಗಾಗಿ ಯಾರನ್ನಾದ್ರೂ ಎದುರು ಹಾಕಿಕೊಳ್ಳುವ ಧೈರ್ಯನಾ? ಒಟ್ಟಿನಲ್ಲಿ ನಾನೂ ಸೋಲಲು ಸಿದ್ಧಳಿರಲಿಲ್ಲ. ಅಣ್ಣ ಈ ಸಮಾಜದ ಕಟ್ಟಳೆಗಳನ್ನ ಯಾವತ್ತೋ ಧಿಕ್ಕರಿಸಿದ್ದ. ಅವನೊಬ್ಬನೇ ಸದಾ ನನ್ನ ಜೊತೆ ನಿಂತು ಧೈರ್ಯ ತುಂಬೋನು ಅನಿಸ್ತಿತ್ತು.


ಮೊನ್ನೆ ಒಂದಿನ ನಾನು ಹೀಗೆ ಹೊರಗಡೆ ಕುಳಿತು ಕಲ್ಲೆತ್ತಿ ಒಗೆಯುತ್ತಿರುವಾಗ, ಒಳಗಡೆ ಕೋಣೆಯಲ್ಲಿ ಅತ್ತಿಗೆಗೂ, ಅಮ್ಮಂಗೂ ಜಗಳ ಶುರುವಾಯ್ತು. ಜಗಳ ಮುಂದುವರಿದು ಇಬ್ಬರ ಧ್ವನಿಯೂ ಜೋರಾಗತೊಡಗಿದಾಗ ನನ್ನ ಕಿವಿಗೂ ತಟ್ಟಿತು. ಒಳಗೆ ಓಡಿದೆ. ಅಮ್ಮ ಸಿಟ್ಟಿನಲ್ಲಿ ಕೂಗಾಡ್ತಿದ್ದರು. ಮುಖವೆಲ್ಲ ಕೆಂಪಾಗಿತ್ತು. ನಾನು ಬಾಗಿಲಲ್ಲೇ ನಿಂತೆ. ನಂಗೆ ಜಗಳದ ತಲೆ ಬುಡ ಅರ್ಥವಾಗಿರಲಿಲ್ಲ. ಅತ್ತಿಗೆ ತಲೆ ಕೆಳಗೆ ಹಾಕಿ ನಿಂತಿದ್ದರೂ ದನಿ ಜೋರಾಗಿಯೇ ಇತ್ತು. ನಂಗೆ ವಿಷ್ಯ ಏನೂಂತ ಗೊತ್ತಾಗದೇ ಯಾರ ಪರ ವಹಿಸುವುದು ಸಾಧ್ಯವಿರಲಿಲ್ಲ. ನಾನು ಒಳಬಂದಿದ್ದು ನೋಡಿ ಅಮ್ಮ ಮಾತು ನಿಲ್ಲಿಸಿಬಿಟ್ಟರು. ಅತ್ತಿಗೆ ತಲೆ ಕೆಳಗೆ ಹಾಕಿಯೇ ಏನೋ ಗೊಣಗಿಕೊಂಡರು. "ಏನಾಯ್ತು?" ಕೇಳಿದೆ ಅಮ್ಮನ ಹತ್ರ. "ಏನೂ ಇಲ್ಲ ಬಿಡು" ಅನ್ನುತ್ತಾ ಆಚೆ ಹೊರಟು ಹೋದರು. ಅತ್ತಿಗೆಯ ಹತ್ತಿರ ಕೆಳಿದರೆ ಅವರೂ, "ಏನೂ ಇಲ್ಲ" ಅನ್ನುತ್ತಾ ಕೋಣೆಗೆ ಹೋಗಿಬಿಟ್ಟರು. ಅವರು ನನ್ನ ವಿಷ್ಯವಾಗಿಯೇ ಜಗಳಡುತ್ತಿದ್ದಿರಬಹುದಾ? ಅನಿಸಿತು. ಕೋಣೆಗೆ ಹೋಗಿ ನೆಲ ನೋಡುತ್ತಾ ಕುಳಿತೆ.

ಅವತ್ತು ಸಂಜೆ ಅಂಗಳದಲ್ಲಿ ಕುಳಿತು ಯಾವತ್ತಿನ ಹಾಗೆ ಕಲ್ಲು ಒಗೆಯುತ್ತಿರುವಾಗ ಅಪ್ಪ ಒಳ ಬಂದರು. ವಾರೆಗಣ್ಣಲ್ಲೇ ನೋಡಿದೆ. ಅವರು ಇಡುತ್ತಿದ್ದ ಹೆಜ್ಜೆ ಕಂಡೇ, ಅವರು ಇವತ್ತು ಸಿಟ್ಟು ಮಾಡ್ಕೊಂಡಿಲ್ಲ ಅಂತ ಗೊತ್ತಾಗಿ ಹೋಯ್ತು. ಆಶ್ಚರ್ಯವಾಯ್ತು. ದಿನಾ ಹೀಗೆ ೫೦ ಕಲ್ಲಾದರೂ ಒಗೆದು ಸಿಟ್ಟು ತೀರಿಸಿಕೊಳ್ಳಬೇಕು ಅಂದ್ಕೊಂಡಿದ್ದೆ. ಅವತ್ತು ಲೆಕ್ಕ ತಪ್ಪಿ ಹೋಯ್ತು. ಆಪ್ಪ, ಅಮ್ಮನ ಹತ್ತಿರ ಏನು ಹೇಳ್ತಿರಬಹುದು ಕೇಳೋಣ ಅಂದುಕೊಂಡು ಶಬ್ಧ ಮಾಡದೇ ಒಳಗೆ ಬಂದೆ. ಅಪ್ಪ, ಅಮ್ಮನ ಹತ್ರ ಹೇಳ್ತಿದ್ದರು," ಆ ಹುಡ್ಗ ನಮ್ಮ ಜಾತಿನೇ ಅಂತೆ. ನಿಜವಾಗಿ ನೋಡಿದ್ರೆ ನಂಗೆ ದೂರದ ಸಂಬಂಧಿ ಆಗ್ಬೇಕು. ಮನೆಯವರೂ ಎಲ್ಲಾ ಒಳ್ಳೆಯವ್ರು. ಒಳ್ಳೆಯ ಸಂಬಂಧ." ನಂಗೆ ಒಮ್ಮೆಲೆ ಖುಶಿಯಾಯಿತು ಅಪ್ಪ ಒಪ್ಪಿದ್ರಲ್ಲ ಅಂತ. ಪಕ್ಕನೆ, ’ಅಪ್ಪ ಹುಡುಗ ತಮ್ಮದೇ ಜಾತಿ ಅನ್ನೋ ಕಾರಣಕ್ಕೆ ಒಪ್ಪಿದರೆ ವಿನಾ ಮಗಳು ಪ್ರೀತಿಸ್ತಿದಾಳೆ ಅಂತಲ್ಲ’ ಅನ್ನೋದು ಹೊಳೆದು ನಿಂತ ನೆಲ ತಿರುಗಿದ ಹಾಗಾಯ್ತು. ಅಪ್ಪ ಮಗಳು ಪ್ರೀತಿಸಿದ ಹುಡುಗ ತಮ್ಮದೇ ಜಾತಿ ಎಂದು ತಿಳಿದು ಸಂಭ್ರಮಿಸ್ತಿದ್ದರೆ, ನಂಗೆ ಅಪ್ಪನ ಮೇಲೆ ಇದ್ದ ಗೌರವವೆಲ್ಲ ಕರಗುತ್ತಿತ್ತು. ಅಪ್ಪ ಯಾಕೆ ಹೀಗೆ? ಅರ್ಥವಾಗಲಿಲ್ಲ. ಅಕಸ್ಮಾತ್ ಹುಡುಗ ಬೇರೆ ಜಾತಿಯಾಗಿದ್ದರೆ?.... ನಾನೆ ಬೀಸಿ ಒಗೆದ ಕಲ್ಲುಗಳು ಬಂದು ಮತ್ತೆ ನನ್ನ ತಲೆಗೇ ಬಡಿದ ಹಾಗಾಗುತ್ತಿತ್ತು. ನಾನು ವಿಚಿತ್ರ ಉಮ್ಮಳದಲ್ಲಿ ಬಿಕ್ಕಿ ಬಿಕ್ಕಿ ಅತ್ತೆ. ಅಪ್ಪ ಖುಶಿಯಿಂದ ಈ ವಿಷ್ಯ ಹೇಳಲು ನನ್ನ ಕೋಣೆಗೆ ಬಂದವರು, ನನ್ನ ಹೊಸ ಥರದ ವರ್ತನೆ ಅರ್ಥವಾಗದೆ, ಆತಂಕದಲ್ಲಿ ಪಕ್ಕದಲ್ಲಿದ್ದ ಅಮ್ಮನ ಮುಖ ನೋಡಿದರು. ಅಮ್ಮ, ಒಡೆದು ಹೋದ ನನ್ನ ಮನಸನ್ನು, ನನ್ನ ಕಣ್ಣೀರಿನ ಹನಿಗಳಲ್ಲಿ ಹುಡುಕಲು ಯತ್ನಿಸುತ್ತಿದ್ದಳು.

8:11 AM

ನನಗಿನ್ನೂ ಜಾರುವ ನೆಲದ್ದೇ ಚಿಂತೆ

ಅಪ್ಪ ಬೆಳೆಯುತ್ತಿದ್ದಾನೆ
ಒಂದೇ ಸಮನೆ ಉದ್ದಾನುದ್ದ
ಬಿದಿರು ಮೆಳೆಯಂತೆ
ಗಾಳಿ ಮರದ ಕೊಂಬೆಯಂತೆ
ಎಲ್ಲ ಅಳತೆಗಳ ಮೀರಿ
ನಾನು ನೋಡ ನೋಡುತ್ತಿದ್ದಂತೆ
ಏಕ್ ದಂ........

ಅವನು ಬದಲಾಗಿದ್ದಾನಾ?
ತಿಳಿಯುತ್ತಿಲ್ಲ ನನಗೆ
ನನ್ನ ತಿಳಿವಿಗೆ ಮೀರಿ ಏರಿದ್ದಾನೆ
ಆಗಸದೆತ್ತರಕ್ಕೆ ಶಿಖರದಂತೆ
ನಾನು ನೆಲದ ಮೇಲಿನ ಹುಲ್ಲು
ಅವನ ನಿಲುಕಲಿ ಹೇಗೆ?

ಅಪ್ಪ.... ಅಪ್ಪ.....
ಕರೆದಿದ್ದು ಕೇಳಿಸಿರಬಹುದಾ?
ಅಪ್ಪನೇ ಹೌದಾ?
ಯಾಕೋ ಒಂಥರಾ ಕಳವಳ,
ವ್ರಥಾ ಗಾಬರಿ
ನಾವೆಲ್ಲ ಇಲ್ಲೇ ಹೀಗೆ ಇರುವಾಗ
ಅದು ಹೇಗೆ ಅಪ್ಪ ಬೆಳೆದುಬಿಟ್ಟ?

ಅರೇ... ನನ್ನನ್ನೇ ಕರೆಯುತ್ತಿದ್ದಾನೆ
ಕೈ ಚಾಚುತ್ತಿದ್ದಾನೆ
ತನ್ನ ಹಾಗೆ ಬೆಳೆಯಲಿ ಅಂತ
ನನಗಿನ್ನೂ ಜಾರುವ ನೆಲದ್ದೇ ಚಿಂತೆ.

6:22 AM

ನೆನಪುಗಳು ಆರುತ್ತಲೇ ಇಲ್ಲ...

ಜಾತ್ರೆಯಲ್ಲಿ ಕೊಂಡ ಪುಟ್ಟ
ಪರ್ಸಿನ ಒಳಗೆ ಇನ್ನೂ ಆ
ಬೆಣಚುಗಲ್ಲಿನದೇ ನುಣುಪು
ನನ್ನೊಳಗೆ ನಾನು
ಉರಿದದ್ದೇ ಬಂತು
ನೆನಪುಗಳು ಆರುತ್ತಲೇ ಇಲ್ಲ
ನೆನೆದಾಗೆಲ್ಲ ಮೈ ಕಾವು
ಬೆತ್ತಲೆಯ ಸುತ್ತಿಕೊಂಡ
ಮೆತ್ತನೆಯ ರಾತ್ರಿಗೆ
ಉರಿ ಉರಿ ಸೂರ್ಯನ ನೆನಪು
ಬೆಳದಿಂಗಳು ನಗುವಾಗೆಲ್ಲ
ನಂಗೆ ಚಂದ್ರನ ಮೇಲೆ
ಹೊಟ್ಟೆಕಿಚ್ಚು
ಕತ್ತಲ ರಾತ್ರಿಯೇ ಅಲ್ಲವೇ
ನನ್ನ ಹೂವಾಗಿ ಅರಳಿಸಿದ್ದು
ಹುಣ್ಣಿಮೆಗೆ ಸವಾಲೆಸೆವಂತೆ
ಅಮಾವಾಸ್ಯೆಯ ರಾತ್ರಿ
ಅಲೆಗಳು ಭೋರ್ಗರೆವಾಗೆಲ್ಲ
ನನಗೇನೋ ಹುರುಪು.