9:22 PM

ಬೆಳ್ಳಿ ಬಟ್ಟಲು

ಅಮ್ಮ ಕೊಟ್ಟ ಬೆಳ್ಳಿ ಬಟ್ಟಲಿಗೀಗ
ತುಂಬು ಐದರ ಹರೆಯ
ಕಾಲ ಮೇಲೆ ಕೂಸೇ ಇಲ್ಲ

ಕೂಸು ಹುಟ್ಟೋ ಮುಂಚೆಯೇ
ಹೊಲಿದಿಟ್ಟಿದ್ದ ಕುಲಾವಿ ಮೂಲೆ ಸೇರಿದೆ
ಕಂದನಿಗೆಂದು ತಂದಿದ್ದ ಮೂರು ಗಾಲಿಯ
ಸೈಕಲ್ ಕತ್ತಲ ಅಟ್ಟ ಏರಿದೆ

ಪುಟ್ಟ ಪಾದಗಳ ಸ್ಪರ್ಶವಿಲ್ಲದೆ
ನೆಲವೂ ಬಾಯ್ಬಿರಿದಿದೆ
ಕಂದ ಹಿಡಿದೆಳೆಯದೇ ತಾಯಿಯ
ತಾಳಿಯೂ ಸೂತಕದಲ್ಲಿದೆ

ಮನೆಯಲ್ಲಿ ಬೀಸಣಿಕೆ ಗಾಳಿಯೇ ಇಲ್ಲ
ಒಳಗೆಲ್ಲ ಧಗೆ, ಹೊರಗೂ ಹೊಗೆ
ಗೊಂಬೆಗಳೆಲ್ಲಾ ಭಣಗುಟ್ಟುತ್ತಿವೆ
ಕಂದ ತೊದಲದ ಮನೆಯಲ್ಲಿ ಮಹಾಮೌನ.

9:14 PM

ಪ್ರೀತಿ - ರೀತಿ

ನೆಲ ನಡುಗಿದೆ
ಬಾನ್ ಗುಡುಗಿದೆ
ಇದು ಯಾತರ ಪ್ರೀತಿ?

ಮನ ಮೆಚ್ಚಿದ
ಇಳೆಯೆದೆಯಲಿ
ಏತಕೋ ಈ ಭೀತಿ?

ಕರಿ ಮೇಘವು
ಕುಡಿ ನೋಟದಿ
ಮೈ ಮರೆಸುವ ರೀತಿ

ಭುವಿ ಉಟ್ಟಿಹ
ಜರಿ ಸೀರೆಗೆ
ಹಚ್ಚಸಿರ ಕಸೂತಿ

ಮೈ ಬೆಚ್ಚಿದೆ
ಕಣ್ ಮಿಂಚಿದೆ
ಇದು ಯಾತರ ಪ್ರೀತಿ?

12:46 AM

ಹಾಲಂಥ ಬೆಳದಿಂಗಳೇ...

ಅವಳು ಕುಳಿತಿದ್ದ ಬಸ್ಸಿನ ವೇಗಕ್ಕೂ, ಅವಳ ಮನಸ್ಸಿನ ವೇಗಕ್ಕೂ ತಾಳೆ ಹೊಂದುತ್ತಿರಲಿಲ್ಲ. ಗೊಂದಲಗಳ ಗೂಡಾಗಿದ್ದ ಮನಸ್ಸು ಅವಳಲ್ಲಿ ವಿಚಿತ್ರ ತಳಮಳ ಉಂಟುಮಾಡಿತ್ತು. ಊರು ಹತ್ತಿರ ಬರುತ್ತಿದ್ದಂತೆ ಎದೆಯಲ್ಲಿ ಸಂಕಟ, ವೇದನೆ. ಎಂದಿನಂತೆ ಕಣ್ಣು ಮುಚ್ಚಿ ಕುಳಿತರೂ ಮನಸ್ಸು ಸ್ತಿಮಿತಕ್ಕೆ ಬರುವಂತೆ ಕಾಣಲಿಲ್ಲ. ಹಿತವಾಗಿ ಬೀಸುತ್ತಿದ್ದ ತಂಗಾಳಿಯೂ ಮುದ ನೀಡಲಿಲ್ಲ. ಕತ್ತಲು ಆಗಷ್ಟೇ ಚಿನ್ನಾಟಕ್ಕೆ ಶುರು ಮಾಡಿತ್ತು. ಕಿಟಕಿಯಿಂದ ಹೊರ ನೋಡುತ್ತಾ ಕುಳಿತಳು. ತಂದೆಯೊಬ್ಬ ಮಗುವಿಗೆ ಐಸ್ ಕ್ರೀಮ್ ಕೊಡಿಸುತ್ತಿದ್ದುದು ಕಾಣಿಸಿತು. ಎಷ್ಟು ನೆನಪಿಸಿಕೊಂಡರೂ ನೆನಪಾಗದ ಅಪ್ಪನ ಮುಖವನ್ನು ಮತ್ತೆ ಕಲ್ಪಿಸಿಕೊಳ್ಳಲು ಯತ್ನಿಸಿದಳು. ಸಾಧ್ಯವಾಗಲಿಲ್ಲ. ಕಣ್ಣಲ್ಲಿ ನೀರು ತುಂಬಿತ್ತು. ಜೋರಾಗಿ ಅತ್ತು ನೋವನ್ನೆಲ್ಲ ಹೊರಹಾಕಿ ಬಿಡಲೇ ಅಂದುಕೊಂಡು ಅಕ್ಕ ಪಕ್ಕ ನೋಡಿದಳು. ಅವರುಗಳೆಲ್ಲ ಅವಳನ್ನೇ ಅನುಕಂಪದಿಂದ ನೋಡುತ್ತಿದ್ದಂತೆನಿಸಿತು. ಕಣ್ಣು ತಪ್ಪಿಸಿ ಹೊರನೋಡತೊಡಗಿದಳು ಮತ್ತೆ.

ಅಮ್ಮನ ಪ್ರೀತಿ, ಮಮತೆಯನ್ನೇ ಮಡಿಲಲ್ಲಿ ತುಂಬಿಕೊಂಡಂತೆ ಆಗಸದೆತ್ತರಕ್ಕೆ ಚಾಚಿ ನಿಂತ ಬೆಟ್ಟಗಳು ಅವಳನ್ನೆ ಕೈ ಬೀಸಿ ಕರೆದಂತಿತ್ತು. ಎದುರುಗಡೆ ಸೀಟ್ ನಲ್ಲಿ ಕುಳಿತ ಯುವಕನೊಬ್ಬ ಕೈಲಿ ಪುಸ್ತಕ ಹಿಡಿದು ಓದುವುದರಲ್ಲಿ ತಲ್ಲೀನನಾಗಿದ್ದ. "ಬರೀ ಪುಸ್ತಕ ಓದೋದರಿಂದ ಯೇನೂ ಸಾಧಿಸಿದಂತಾಗೊಲ್ಲ. ಬದುಕು ಥಟ್ಟಂತ ನಮ್ಮೆದುರು ತಿರುವುಗಳನ್ನು ತಂದಿಟ್ಟಾಗ ಧೈರ್ಯದಿಂದ ಒಂದು ದಾರಿ ಆರಿಸಿ ಮುನ್ನಡೆಯೋದು ಇದ್ಯಲ್ಲ. ಅದೇ ದೊಡ್ಡ ಸಾಧನೆ" ಎಂದು ಕೂಗಿ ಹೇಳಬೇಕೆನ್ನಿಸಿತು. ಹಾಗೆ ತನ್ನ ಬಾಲ್ಯ, ಶಾಲೆ ಎಲ್ಲಾ ನೆನಪಾಯಿತು. ಕೆಂಪು ಬಾಜಾರದ ಹೆಸರು ಕೇಳಿದರೆ ಅಸಹ್ಯ ಪಡುತ್ತಿದ್ದ ತನ್ನನ್ನು ಅದೇ ಕೊಳಚೆ ಹೊಂಡಕ್ಕೆ ತಂದು ಹಾಕಿದ ಬದುಕಿನ ದಾರುಣ ಅನಿವಾರ್ಯತೆ ಎಂಥದ್ದು? ಯೋಚಿಸುತ್ತಿದ್ದವಳಿಗೆ ೪ ನೇ ಕ್ಲಾಸಿನಲ್ಲಿ ಸಹಪಾಠಿಯಾಗಿದ್ದ ಕುಂಟ ಸೀನನ ನೆನಪಾಯಿತು. ಆ ಚಿಕ್ಕ ವಯಸ್ಸಿನಲ್ಲೇ ಎಲ್ಲರನ್ನೂ ಕಳೆದುಕೊಂಡು, ವಿದ್ಯಾಭ್ಯಾಸಕ್ಕೆ ಎಳ್ಳು ನೀರು ಬಿಟ್ಟಿದ್ದ ಸೀನ ಬೊಂಬಾಯಿಯ ರೈಲು ಹತ್ತಿದ್ದನೆಂದು ಯಾರೋ ಹೇಳಿದ್ದರು. ನಂತರ ಅವನೆಲ್ಲೋ ಡ್ರೈವರ್ ಆಗಿದಾನಂತೆ, under world ಸೇರಿದಾನಂತೆ.. ಹೀಗೆ ಥರ ಥರದ ಮಾತುಗಳು. ಆ ಚಿಕ್ಕ ವಯಸ್ಸಿನಲ್ಲೇ ಅಷ್ಟೆಲ್ಲ ನೋವುಂಡರೂ ಬದುಕುವ ದಾರಿ ಆಯ್ದುಕೊಂಡ ಅವನ ಅನಿವಾರ್ಯತೆ ಎಂಥದ್ದು? ಯೋಚಿಸುತ್ತಿದ್ದಂತೆ ತಾವಿಬ್ಬರೂ ಒಂದೇ ದಾರಿಯ ಪಯಣಿಗರೆನ್ನಿಸತೊಡಗಿತು. ಎಲ್ಲಿದ್ದರೂ ಅವನು ಸುಖವಾಗಿರಲಿ ಎಂದು ಹಾರೈಸಿದಳು.

ತನ್ನದೇ ಒಂದು ಪುಟ್ಟ ಜಗತ್ತಿನಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದ ಅವಳನ್ನು ಈ ದುರ್ಗಮ ಪ್ರಪಂಚಕ್ಕೆ ತಳ್ಳಿದ ಆ ಕ್ರೂರ ವಿಧಿಯನ್ನು ಶಪಿಸಿದಳು. ಅಷ್ಟರಲ್ಲಿ ಇಳಿಯಬೇಕಾದ ಜಾಗ ಬಂತು. ಬಸ್ ಸ್ಟಾಂಡ್ ನಲ್ಲಿ ಅವಳಿಗಾಗಿ ಕಾದು ನಿಂತಿದ್ದರು ಅಮ್ಮ, ತಮ್ಮ. ’ಅವರಿಬ್ಬರ ಬಳಿಯೂ ತುಂಬಾ ಮಾತನಾಡಬೇಕು. ತಾನು ಚೆನ್ನಾಗಿದ್ದೇನೆ, ಒಳ್ಳೆಯ ಕೆಲಸದಲ್ಲಿದ್ದೇನೆ ಅಂತ ಹೇಳಬೇಕು. ಅಮ್ಮನನ್ನ ಡಾಕ್ಟರ್ ಬಳಿ ಕರೆದೊಯ್ಯಬೇಕು. ಅಮ್ಮನ ಕೈಯಲ್ಲಿ ದುಡ್ಡು ಕೊಟ್ಟಾಗ ಅವಳ ಕಣ್ಣಲ್ಲಿನ ಆ ಸಂಭ್ರಮ ನೋಡಬೇಕು.’ ಎಂದುಕೊಳ್ಳುತ್ತಾ ಇಳಿದಳು. ಆಗಸದಲ್ಲಿ ಚಂದಿರ ಕಿರುನಗೆ ಚೆಲ್ಲುತ್ತಾ ಮೆಲ್ಲನೆ ಹೊರಬರುತ್ತಿದ್ದ. ಅಲ್ಲೊಂದು ಹಾಲು ಬೆಳದಿಂಗಳ ತಣ್ಣನೆ ರಾತ್ರಿ ಅವಳಿಗಾಗಿ ಕಾದಿತ್ತು.