9:32 PM

ಬಸ್ ಸ್ಟಾಂಡನಲ್ಲಿ ಹಣ್ಣು ಮಾರುವ ಹುಡುಗ

" ಅಕ್ಕಾ.. ತಗೊಳ್ಳಿ ಅಕ್ಕ, ಎಲ್ಲಾ ಫ್ರೆಶ್ ಹಣ್ಣುಗಳು ಅಕ್ಕ... ನೋಡಿ ಎಷ್ಟು ಚೆನ್ನಾಗಿವೆ" ಹಣ್ಣುಗಳನ್ನು ತೋರಿಸುತ್ತಾ ಹೇಳುತ್ತಿದ್ದ ಆ ಹುಡುಗ. "ಕಿತ್ತಳೆ ಕಿಲೊಗೆ ಎಷ್ಟಪ್ಪಾ?" ಕೇಳಿದಳು ಅವಳು. "40 ಅಕ್ಕಾ... ಒಳ್ಳೇದಿದೆ. 35 ಕ್ಕೆ ಬೇಕಾದ್ರೆ ಕೊಡ್ತೀನಿ" ಮತ್ತೆ ಒತ್ತಾಯಿಸತೊಡಗಿದ. ಬೆಲೆ ಕೇಳುತ್ತಲೇ ಅವಳ ಎದೆ ಹೊಡಕೊಳ್ಳತೊಡಗಿತು. ಬೆವರು ಸುರಿಸಿ ಪೈಸೆ ಪೈಸೆ ಒಟ್ಟು ಮಾಡ್ತಿರೋ ಅವಳು ಇಷ್ಟು ಬೆಲೆಯ ಹಣ್ಣು ಕೊಂಡು ತಿಂದರೆ ಅದರ ರುಚಿ ಅನುಭವಿಸೋದು ಸಾಧ್ಯಾನೇ ಇರಲಿಲ್ಲ. " ಬೇಡಪ್ಪ" ಎಂದಳು ಆ ಹುಡುಗನಿಗೆ.
ಡ್ರೈವರ್ ಇನ್ನೂ ಬಂದಿರಲಿಲ್ಲ. ನಿಂತ ಬಸ್ಸಿನಲ್ಲಿ ಗಾಳಿಯೂ ಬೀಸುತ್ತಿರಲಿಲ್ಲ. ಸೆಖೆ ಬೇರೆ. ಮೈಯೆಲ್ಲಾ ಬೆವರುತ್ತಿತ್ತು. ಆ ಹುಡುಗ ಅಲ್ಲೆ ನಿಂತು, " ತಗೊಳ್ಳಿ ಅಕ್ಕ, ಬೆಳಿಗ್ಗೆಯಿಂದ ಚೂರು ವ್ಯಾಪಾರ ಆಗಿಲ್ಲ. 2 ದಿನದಿಂದ ಮನೇಲಿ ಯಾರ ಹೊಟ್ಟೇನೂ ತುಂಬಿಲ್ಲಕ್ಕ. ತಂಗಿಗೆ ಬೇರೆ ಮೈಗೆ ಹುಶಾರಿಲ್ಲ" ಅಂದ ಹನ್ನೆರಡರ ಆ ಪೋರ. ಅವನ ಮಾತು ಕೇಳಿದವಳು ಅವನೆಡೆಗೆ ತಿರುಗಿ, ಅವನ ಆ ಮುಗ್ಧ ಮುಖವನ್ನು, ಆ ಅಮಾಯಕ ಕಂಗಳನ್ನು, ಅದರಲ್ಲಿನ ಹಸಿವನ್ನು, ಆಸೆ-ಕನಸುಗಳನ್ನು ನಿಲುಕಲು ಯತ್ನಿಸಿದಳು. ಅವನ ಕಣ್ಣುಗಳಲ್ಲಿ ತನ್ನ ಬಾಲ್ಯದ ಪ್ರತಿಬಿಂಬ ಕಂಡಂತಾಗಿ ಮನಸ್ಸಿಗೆ ತುಂಬಾ ನೋವಾಯಿತು. ಆ ಚಿಕ್ಕ ವಯಸ್ಸಿಗೇ ಮನೆಯ ಭಾರವೆಲ್ಲ ಹೊತ್ತ ಪುಟ್ಟ ಹುಡುಗನ ಮೇಲೆ ಮೆಚ್ಚುಗೆ, ಮಮತೆ ಮೂಡಿತು. ಕಿಟಕಿಯಿಂದ ಕೈ ಚಾಚಿ, ಆತನ ತಲೆ ಸವರಿ, ಕೆನ್ನೆ ನೇವರಿಸುವ ಮನಸ್ಸಾದರೂ ಹಾಗೆ ಮಾಡುವುದು ಸರಿಯಾಗದೇನೋ ಅನ್ನಿಸಿ ಸುಮ್ಮನಾದಳು.
"30 ಕ್ಕೆ ಕೊಡೊದಾದ್ರೆ 2 ಕಿಲೊ ಕೊಡು" ಪಕ್ಕಾ ಚೌಕಾಸಿ ಮಾಡಿ ಕೇಳಿದಳು. ಆತ ಚಿಕ್ಕ ಮುಖ ಮಾಡಿಕೊಂಡರೂ ಕೊನೆಗೆ ಅಷ್ಟಾದರೂ ಸಿಕ್ಕಿತಲ್ಲ ಎಂಬಂತೆ, 2 ಕಿಲೊ ಕಿತ್ತಳೆ ಕೊಟ್ಟು ಅವಳು ಕೊಟ್ಟ 60 ರೂಪಾಯನ್ನು ಜೇಬಿಗಿಳಿಸಿ, ಕಿಸೆಯನ್ನೊಮ್ಮೆ ಮುಟ್ಟಿ ನೋಡಿಕೊಂಡ. ಮತ್ತೆ ಅವಳ ಕಡೆಗೊಮ್ಮೆ ನೋಡಿದ.
ಅಷ್ಟರಲ್ಲಿ ಡ್ರೈವರ್ ಬಸ್ಸಿನ ಬಳಿ ಬಂದ. ಹುಡುಗ ಅಲ್ಲೇ ನಿಂತಿದ್ದ. ಬಸ್ಸು ಇನ್ನೇನು ಹೊರಡಬೇಕು ಅನ್ನೋವಾಗ ಏನೋ ನೆನಪಾದವರಂತೆ, ಟಿಕೆಟ್ ಗೆ ಅಂತ ಹಿಡಿದುಕೊಂಡಿದ್ದ ಹಣದಲ್ಲಿ 20 ರೂಪಾಯಿಯ ನೋಟು ತೆಗೆದು ಕಿಟಕಿಯಿಂದ ಕೈ ಹೊರಹಾಕಿ ಆ ಹುಡುಗನಿಗೆ ಕೊಟ್ಟಳು. ಆ ಹುಡುಗ ಗಾಬರಿ, ಅಚ್ಚರಿ, ಗೊಂದಲ ದಿಂದ ಕೈಯಲ್ಲಿ ಹಿಡಿದ ನೋಟನ್ನೂ, ಬಸ್ಸಿನಲ್ಲಿ ಕುಳಿತು ದೂರಾಗುತ್ತಿರುವ ಆಕೆಯ ಮುಖವನ್ನೂ ನೋಡುತ್ತಾ ನಿಂತ. ಅವಳು ಕಿಟಕಿಯಿಂದ ಮುಖ ಹೊರ ಹಾಕಿ ’ಇಟ್ಟುಕೋ’ ಅಂತ ಸನ್ನೆ ಮಾಡಿದಳು. ಅವನು ಏನೊಂದೂ ಅರ್ಥವಾಗದೆ, ಬಸ್ಸು ದೂರಾಗುವವರೆಗೂ ಅವಳು ಕುಳಿತ ಬದಿಗಿನ ಕಿಟಕಿಯನ್ನೆ ನೋಡುತ್ತಿದ್ದ. ಅಂಗಡಿಯಲ್ಲಿ 50 ಪೈಸೆಗೆ ಚೌಕಾಸಿ ಮಾಡುವ, ಮತ್ತೆ ನಾನು ಕೇಳದೆ ಹೋದರೂ ನನ್ನ ಕಣ್ಣುಗಳನ್ನು ನೋಡಿಯೇ, ಚಾಕ್ಲೇಟ್ ತೆಗೆಸಿಕೊಡುವ ನನ್ನಮ್ಮ ನೆನಪಾದಳು.

5:42 AM

ನಿನಗಾಗಿ

ಬದುಕಿನ ಪುಸ್ತಕದ ಹರಿದ
ಪುಟಗಳ ನಡುವೆ
ನೀರೆರಚಿ ಹಿಂಜಿದ
ಅಕ್ಷರಗಳ ನಡುವೆ
ಹುಡುಕುತ್ತಿರುವೆ ನಿನ್ನ
ನೆನಪುಗಳ ದೀಪ ಹಿಡಿದು

ಕಣ್ಣು ಹಾಳೆಯೊಳಗೇ
ಹೋದರೂ ಕಾಣಿಸದಷ್ಟು
ಮಸುಕಾಗಿದೆ ಅಕ್ಷರಗಳು
ಆದರೂ ನೀ ಬಂದ
ಹೆಜ್ಜೆ ಗುರುತು ಅಲ್ಲೆಲ್ಲಾದರೂ
ಇನಿತು ಅಚ್ಚೊತ್ತಿರಬಹುದೇ
ಎಂಬ ಭ್ರಮೆಯಲಿರುವೆ

ನೀ ಮತ್ತೆ ನನ್ನ ಬದುಕಿನ
ಖಾಲಿ ಹಾಳೆಗಳ ಮೇಲೆ
ಮುದ್ದು ಅಕ್ಷರವಾಗುವುದು ಬೇಡ
ಬದುಕಿಗೆ ರಂಗೇರಿಸುವುದೂ ಬೇಡ
ಆ ಪುಟಗಳಲ್ಲಿ ಅಕ್ಷರವಾಗಿ
ಒದ್ದಾಡುವ ನಿನ್ನ ಮುದ್ದು ಮುಖ
ನನ್ನ ಕಣ್ಣ ಒದ್ದೆ ಮಾಡುವುದೂ ಬೇಡ

ನೀ ಜತೆಗಿದ್ದ ಕ್ಷಣಗಳ ನೆನೆದು
ಖುಶಿಯಾಗುತ್ತ ಅವುಗಳಿಂದಲೇ
ಬದುಕಿಗೆ ಸ್ಪೂರ್ತಿ ಪಡೆಯುತ್ತ
ಎಲ್ಲ ನೋವುಗಳ ನಡುವೆಯೂ
ನಿನ್ನ ನಗು ಮೊಗವನ್ನು
ಕಂಗಳಲ್ಲಿ ತುಂಬಿಕೊಂಡು
ನಿನಗಾಗಿ ಬದುಕುತ್ತಿರುವೆ.

2:47 AM

ನಾನು, ಅವಳು ಮತ್ತು ಒಂದು ನವಿಲುಗರಿ ಜಗಳ

"ನಾನು ಯಾಕಾದ್ರೂ ಅವಳ ಬಗ್ಗೆ ಪೇಪರ್ ನಲ್ಲಿ ಬರೆದನೇನೋ ಅನಿಸ್ತಿದೆ. ಅದ್ಯಾರೋ ಹೇಳಿದ್ರು ಅಂತ ಕಲ್ಪನೆಯ ಕತೆ ಎಲ್ಲ ಬಿಟ್ಟು ಸತ್ಯ ಘಟನೆಗಳನ್ನ ಬರೆಯೋಕೆ ಹೊರಟುಬಿಟ್ಟೆ. ಇಲ್ಲದಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಅವಳು ಅದನ್ನು ನೋಡ್ಬಿಟ್ರೆ ಏನು ಮಾಡೋದು?" ಪ್ರಿಯಾಳ ಹತ್ರ ಕೇಳಿದೆ. ಪ್ರಿಯಾ ಸಮಾಧಾನಿಸಿದಳು."ಏನೂ ಆಗೊಲ್ಲ. ಹೆದ್ರಬೇಡ. ಅವಳು ಇದನ್ನೆಲ್ಲ ಎಲ್ಲಿ ಓದ್ತಾಳೆ? ಅಷ್ಟಕ್ಕೂ ನೀನು ಅವಳ ಹೆಸರು ಹಾಕಿಲ್ವಲ್ಲ. ಏನೂ ತೊಂದ್ರೆಯಿಲ್ಲ ಬಿಡು."
"ಆದರೂ ನಾನು ಮಾಡಿದ್ದು ತಪ್ಪಾಯ್ತೇನೋ ಅನಿಸ್ತಿದೆ ಕಣೇ.. ಅವಳ ಖಾಸಗಿ ಬದುಕನ್ನು ಹೀಗೆ ಹರಾಜು ಹಾಕೋದಿಕ್ಕೆ ನಂಗೆ ಏನು ಅಧಿಕಾರ ಇದೆ ಹೇಳು.ಅವಳು ಅದನ್ನ ಓದಿದ್ರೆ ಏನಾಗುತ್ತೋ ಅನ್ನೋ ಭಯದಿಂದ ನಿದ್ರೆನೇ ಬರ್ತಿಲ್ಲ..."ನಾನು ಹೇಳಿದಾಗ ಪ್ರಿಯಾಗೂ ಸ್ವಲ್ಪ ಭಯವಾಗಿರಬೇಕು. ಸುಮ್ಮನೆ ತಲೆ ಮೇಲೆ ಕೈಯಿಟ್ಟು ಕುಳಿತು ಬಿಟ್ಟಳು.

ನಾನು ಹೀಗೆಲ್ಲ ತರಲೆ ಮಾಡಿಕೊಂಡಿದ್ದು ಅಣ್ಣಂಗೆ ಗೊತ್ತಾದ್ರೆ ಅಂತ ಭಯವಾಯ್ತು. ಬೇರೆ ಯಾವ ದಾರಿನೂ ಕಾಣಿಸ್ಲಿಲ್ಲ.
ಮನಸ್ಸು ನಾನು ಮಾಡಿದ್ದೇ ಸರಿ ಅಂತ ನನ್ನ ಸಮರ್ಥಿಸ್ತಿತ್ತು. ಕೊನೆಗೆ ಸ್ವಲ್ಪ ಹುಂಬ ಧೈರ್ಯ ಮಾಡಿ ಹೇಳಿದೆ. "ಪ್ರಿಯಾ, ನಾಳೆ ಅವಳನ್ನು ಮನೆಗೆ ಕರೆದು ಬಾ. ಎಲ್ಲಾ ಹೇಳಿಬಿಡ್ತೇನೆ. ಹಾಗೇನಾದ್ರು ಅವಳು ಸಿಟ್ಟು ಮಾಡ್ಕೊಂಡು ಸಂಬಂಧ ಮುರಿದುಕೊಂಡ್ರೆ, ’ಒಳ್ಳೇದೇ ಆಯ್ತು. ಯಾವತ್ತೂ ನಮ್ಮದು ಆಗಿರದೇ ಇದ್ದ ಸಂಬಂಧ ಒಂದು ಕಡಿದು ಹೋಯ್ತು’ ಅಂತ ಖುಶಿಯಾಗಿ ಇದ್ದುಬಿಡೋಣ" ಅಂದೆ. ಪ್ರಿಯಾಗೆ ನನ್ನ ಯೋಚನೆ ಸರಿ ಕಾಣಿಸಲಿಲ್ಲ. "ನಾವಾಗಿ ಕರೆದು ಹೇಳಿದ್ರೆ, ಅವಳು ಏನು ತಿಳ್ಕೋಬಹುದು? ಬೇಡ. ಅವಳೇ ನೋಡಿದರೆ ನೋಡಲಿ. ಇಲ್ಲಾಂದ್ರೆ ಬೇಡ ಬಿಡು. ನಾವೂ ಸುಮ್ಮನಿದ್ದು ಬಿಡೋಣ." ಅಂದಳು ಪ್ರಿಯಾ. "ಸರಿ ಹಾಗಾದ್ರೆ. ನೇರವಾಗಿ ಹೇಳೋದು ಬೇಡ. ಅವಳನ್ನು ಊಟಕ್ಕೆ ಕರೆದು ತಾ. ನಾನು manage ಮಾಡ್ತೀನಿ." ಅಂದೆ ಮತ್ತದೇ ಹುಂಬ ಧೈರ್ಯದಲ್ಲಿ.

ಪ್ರಿಯಾ ಹೋಗಿ ಹೇಳಿ ಬಂದಳು. ಮಾರನೆ ದಿನ ಅವಳು ನಗ್ತಾ ನಮ್ಮನೆಗೆ ಬಂದಳು. ಪ್ರಿಯಾ ಅಡುಗೆ ಕೋಣೆ ಬಿಟ್ಟು ಹೊರಗೆ ಬರಲೇ ಇಲ್ಲ. ಪ್ರಿಯಾನೂ ಜೊತೆಗೇ ಇದ್ದಿದ್ದರೆ ಚೆನ್ನಾಗಿತ್ತು ಅನಿಸಿತು. ಧೈರ್ಯ ತಂದುಕೊಂಡು ತುಂಬಾ ಹೊತ್ತು ಅದೂ ಇದೂ ಮಾತನಾಡಿದ ಮೇಲೆ " ಈಗ ಬಂದೆ ಇರು" ಅನ್ನುತ್ತಾ ಅಡುಗೆ ಕೋಣೆಗೆ ಎದ್ದು ಹೋದೆ. ಎಲ್ಲಾ ನಾನಂದುಕೊಂಡ ಹಾಗೇ ನಡೆಯುತ್ತಿತ್ತು. ನಾನು ಬಾಗಿಲ ಮರೆಯಲ್ಲಿ ನಿಂತು ನೋಡ್ತಾ ಇದ್ದೆ. ನಾನು ಎದ್ದು ಬಂದ ಮೇಲೆ ಅವಳು ಓದೋಕೆ ಅಂತ ಟೇಬಲ್ ಮೇಲೆ ನಾನಿಟ್ಟಿದ್ದ ಆ ಪೇಪರ್ ತೆಗೆದುಕೊಂಡು ಓದತೊಡಗಿದಳು. ನಾನು ಉಸಿರು ಬಿಗಿ ಹಿಡಿದು ಅವಳನ್ನೇ ನೋಡ್ತಾ ಮುಂದೆ ನಡೆಯಬಹುದಾದ ದುರಂತ ಮತ್ತೆ ಗಲಾಟೆಗಳಿಗೆ ಮನಸಿಕವಾಗಿ ಸಿದ್ಧಳಾಗ್ತಿದ್ದೆ.
ಅವಳು ಓದ್ತಾ ಇದ್ದಳು............. ಓದಿ ಮುಗಿಸಿರಬೇಕು... ಆ ಲೇಖನದ ತುದಿಯನ್ನು ದಿಟ್ಟಿಸಿ ನೋಡ್ತಿದ್ದಾಳೆ. "ಹೌದು.. ಅವಳಿಗೆ ಈಗ ನನ್ನ ಮೇಲೆ ಕೋಪ ಬರುತ್ತೆ. ಕೂಗಾಡ್ತಾಳೆ. ಆದ್ರೆ ನಾನು ಏನೂ ಮಾತನಾಡದೆ ಸುಮ್ಮನೆ ಕೇಳ್ತಿರಬೇಕು. ಅವಳು ಕೂಗಾಡಿ, ಕಿರುಚಾಡಿ ಸುಮ್ಮನಾಗ್ತಾಳೆ. .." ನಾನು ಕಲ್ಪನೆಯಲ್ಲಿ ಮುಳುಗಿದ್ದೆ. ಪ್ರಿಯ ನನ್ನ ಬೆನ್ನು ತಟ್ಟಿದಾಗ ವಾಸ್ತವಕ್ಕೆ ಬಂದೆ. ಪ್ರಿಯ ಏನೂ ಮಾತನಾಡದೆ ತೋರುಬೆರಳಿಂದ ಅವಳನ್ನು ತೋರಿಸಿದಳು. ಅವಳು ಚೂರೂ ಸಿಟ್ಟು ಮಾಡ್ಕೊಂಡಿರಲಿಲ್ಲ.... ಬದಲಿಗೆ ಅಳ್ತಿದ್ದಳು. ನಂಗೆ ಗೊಂದಲ.... ಏನೂ ಅರ್ಥವಾಗ್ಲಿಲ್ಲ. ಪ್ರಿಯ ಸಹ ನನ್ನ ಹಾಗೆ ಗಲಿಬಿಲಿಯಾಗಿದ್ದಳು. ನನ್ನ ಮುಖವನ್ನೇ ನೋಡ್ತಿದ್ದಳು. ಇಬ್ಬರೂ ನಿಧಾನ ಹೊರಗೆ ಹೋದೆವು.

ಅವಳು ಇನ್ನೂ ಅಳುತ್ತಲೇ ಇದ್ದಳು. ನಾನು ಅವಳ ಪಕ್ಕ ಕುಳಿತು "ಏನಾಯ್ತು?" ಕೇಳಿದೆ, ಏನೂ ಗೊತ್ತಿಲ್ಲದೋರ ಥರ. ಮೌನವಾಗಿ ಪೇಪರ್ ತೆಗೆದು ನನ್ನ ಕೈಲಿಟ್ಟಳು. "ಏನೋ ನೆನಪಾಯ್ತು ಅಷ್ಟೇ...." ಅನ್ನುತ್ತಾ ಕಣ್ಣೊರೆಸಿಕೊಂಡಳು. ನಾನು ಹೆಚ್ಚು ಕೆದಕಿ ಕೇಳಲಿಲ್ಲ. ’ ಅವಳು ಬರೆದಿರುವ ನನ್ನ ಹೆಸರು ನೋಡಿಲ್ವಾ? ಅಥ್ವಾ ನೋಡಿಯೂ ಹೀಗೆ ನಾಟಕ ಮಾಡ್ತಿದಾಳಾ?’ ಅಂದುಕೊಂಡೆ. ಯಾವಾಗ್ಲೂ ಸಮರ್ಥಿಸ್ತಿದ್ದ ನನ್ನ ಮನಸ್ಸೂ ನನ್ನ ಪರ ವಹಿಸಲಿಲ್ಲ. ’ಚಿಕ್ಕಂದಿನಲ್ಲಿ ನಮ್ಮ ನಡುವೆ ನವಿಲುಗರಿಗಾಗಿ ನಡೆದ ಒಂದು ಚಿಕ್ಕ ಜಗಳಕ್ಕೆ ನಾನು ಹೀಗೆ ಸೇಡು ತೀರಿಸಿಕೊಂಡೆನಾ?’ ಅವಳನ್ನು ನೋದಲು ಧೈರ್ಯ ಸಾಲದೆ ತಲೆ ಕೆಳಗೆ ಮಾಡಿದೆ. ಪರಿಸ್ಥಿತಿ manage ಮಾಡುವ ಧೈರ್ಯ ಕರಗಿ ಹೋದಂತನಿಸಿತು. ಅಷ್ಟರಲ್ಲಿ ಪ್ರಿಯಾ "ಬನ್ನಿ ಊಟ ಮಾಡೋಣ. ಪಾಯಸ ತಣಿದು ಹೋಗ್ತಿದೆ" ಅಂದಳು. ನಾನೂ ಸ್ವಲ್ಪ ಸುಧಾರಿಸಿಕೊಂಡೆ. "ಬಾ.. ಆಮೇಲೆ ಮಾತಾಡೋಣ" ಎಂದೆ. ಅವಳು ಕೈ ತೊಳೆಯಲು ಎದ್ದು ಹೋದಳು. ಪ್ರಿಯಾ ಅಡುಗೆ ಕೋಣೆಗೆ ಹೋದಳು. ನಾನು ಯಾರಿಗೂ ಕಾಣಿಸದ ಹಾಗೆ ಆ ಪೇಪರ್ ನ್ನು ಬೇರೆ ಕಡೆ ಇಟ್ಟು ಬಿಟ್ಟೆ. ಪೇಪರ್ ಮೇಲೆ ಅವಳ ಕಣ್ಣೀರಿನ ಒಂದು ಹನಿ ನಗುತ್ತಿತ್ತು.

7:51 AM

ಮಾನವೀಯತೆ ಮರೆತವರಿಗೆ..

ಹರಿದ ರಕ್ತದ ಕೋಡಿ ಎಂದಾದರೂ
ನಿಮ್ಮ ಎದೆಯ ಮುಟ್ಟೀತು
ಅಂದು ನಿಮ್ಮ ಆತ್ಮ
ನಿಮ್ಮನ್ನೇ ಧಿಕ್ಕರಿಸೀತು
ನಿಮ್ಮ ಅಮಾನುಷ ಕ್ರತ್ಯಕ್ಕೆ
ನಮ್ಮ ಬಂದೂಕಿನ ಬಾಯೊಳಗೆ
ನಗುವ ಗುಲಾಬಿಗಳೇ ಉತ್ತರಿಸಲಿ
ನಿಮ್ಮ ಗುಂಡುಗಳು
ದೇಹವನ್ನಷ್ಟೇ ಸುಡಬಹುದು
ನಮ್ಮೊಳಗಿನ ಪ್ರೀತಿಯನ್ನಲ್ಲ
ನಮ್ಮ ಪ್ರೀತಿಗೆ ನಿಮ್ಮೊಳಗಿನ
ದ್ವೇಷವನ್ನೂ ಸುಡುವ ಶಕ್ತಿಯಿದೆ
ನಿಮ್ಮ ಬಾಂಬುಗಳು ನಮ್ಮ
ನೆಲವನ್ನಷ್ಟೇ ನಡುಗಿಸಬಹುದು
ನಮ್ಮ ಒಗ್ಗಟ್ಟು, ವಿಶ್ವಾಸವನ್ನಲ್ಲ
ಮಾನವೀಯತೆಯ ಚೀತ್ಕಾರಕ್ಕೆ
ನಿಮ್ಮ ದುಷ್ಟತೆಯ ಫೂತ್ಕಾರ
ಅಡಗಿಸುವ ಕೆಚ್ಚಿದೆ
ನಮ್ಮ ಕಣ್ಣೊಳಗಿನ ಸ್ಥೈರ್ಯಕ್ಕೆ
ನಿಮ್ಮ ಕಣ್ಣ ಕತ್ತಲೆಯ
ಕಳೆಯುವ ತಾಕತ್ತಿದೆ
ನಾವು ಎಂದಿಗೂ ಸೋಲುವುದಿಲ್ಲ
ದ್ವೇಷಕ್ಕೆ, ಹಿಂಸೆಗೆ ತಲೆಬಾಗುವುದಿಲ್ಲ