4:21 AM

ಗೆಳೆಯ ಬಂದನು ಊರಿಗೆ..

ಕೊಟ್ಟ ಮಾತಿನ ಪ್ರಕಾರ ಹೋಗಿ ಒಂದು ತಿಂಗಳ ಬಳಿಕ ರಜೆ ಹಾಕಿ ಮತ್ತೆ ಬಂದಿದ್ದ ಅವನು. ಮನೆಯಲ್ಲಿ ಒಪ್ಪಿಗೆ ಪಡೆದು ಅವನೊಡನೆ ನದಿ ತೀರಕ್ಕೆ ಹೋದವಳು ಅಲ್ಲಿಯೇ ಕುಳಿತು ದಡದಲ್ಲಿದ್ದ ಕಲ್ಲುಗಳನ್ನು ಹೆಕ್ಕಿ, ಒಂದೊಂದಾಗಿ ನೀರಿಗೆ ಬಿಸಾಡುತ್ತಾ ಒಮ್ಮೆ ಅವನತ್ತ ನೋಡಿ ದೀರ್ಘವಾಗಿ ಉಸಿರೆಳೆದುಕೊಂಡು ಮಾತು ಶುರು ಮಾಡಿದಳು. "ನೀನು ಅಲ್ಲಿ ಬಂದೂಕು ಹಿಡಿದು ಹೋರಾಡುತ್ತಿದ್ದರೆ ನಾನು ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಕೂತಿದ್ದೆ. ಕ್ಷಣಕ್ಷಣವೂ ಏನಾಗುತ್ತೋ ಅಂತ ಆತಂಕ. ಎದೆಯ ಡಬ್ ಡಬ್ ಸದ್ದು ನಂಗೇ ಕೇಳಿಸುವಷ್ಟು ಜೋರಾಗಿತ್ತು. ಹೊಟ್ಟೆಗೆ ಏನು ತಿನ್ನುತ್ತಿದ್ದೆನೋ, ಕುಡಿಯುತ್ತಿದ್ದೆನೋ ನನಗೇ ಗೊತ್ತಿರಲಿಲ್ಲ. ನಿನಗೇನೂ ತೊಂದರೆ ಆಗದಿರಲಿ ಅಂತ ದೇವರೆದುರು ತುಪ್ಪದ ದೀಪ ಹಚ್ಚಿಟ್ಟು ನಂದದಂತೆ ಕಾಯುತ್ತಾ ಕೂತಿದ್ದೆ. ವಾರದ ಹಿಂದೆ ಮದರಂಗಿ ಹಚ್ಚಿಕೊಂಡಿದ್ದ ಕೈಗಳು ಗಡಗಡನೆ ನಡುಗುತ್ತಿದ್ದವು. ಟಿ.ವಿ. ಮುಂದೆ ಕೂರುವದಕ್ಕೂ ಧೈರ್ಯವಾಗ್ತಿರಲಿಲ್ಲ. "
" ಒಬ್ಬ ಸೈನಿಕನನ್ನು ಮದ್ವೆಯಾಗೋದಕ್ಕೆ ತುಂಬಾ ಧೈರ್ಯ ಬೇಕು ನಿಜ. ಯಾಕಂದ್ರೆ ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು. ಆದರೆ ನನಗೆ ನಿನ್ನ ಪ್ರೀತಿಸುವಾಗ ಇದ್ದ ಧೈರ್ಯ ಬತ್ತಿ ಹೋಗಿತ್ತು. ಹೆಚ್ಚು ದಿನ ರಜಾ ಸಿಗೋದಿಲ್ಲ, ಇನ್ನೊಂದು ತಿಂಗಳು ಬಿಟ್ಟು ಬರ್ತೀನಿ ಅಂತ ಹೇಳಿ ಹೋಗಿದ್ದ ನೀನು ಬರೋದೇ ಇಲ್ವೇನೋ ಅಂತ ಹೆದರಿ ರಾತ್ರಿಯೆಲ್ಲ ಕಣ್ಮುಚ್ಚುತ್ತಿರಲಿಲ್ಲ. ಅಪ್ಪ, ಅಮ್ಮ, ತಂಗಿ ಎಲ್ಲರೂ ಗಾಬರಿಯಾಗಿದ್ರು. ನಿನಗೆ ಗುಂಡಿನ ಸದ್ದೇ ಸುಪ್ರಭಾತ, ರಾತ್ರಿ ಅದೇ ಜೋಗುಳ. ಸಾವಿನ ಮನೆಯ ಪಕ್ಕದ ಸಣ್ಣ ಓಣಿಯಲ್ಲೇ ನಡೆಯುವವನು ನೀನು. ಆದ್ರೆ ನಂಗೆ ಇದೆಲ್ಲಾ ಹೊಸತು. ನಿನ್ನ ದನಿಯನ್ನು ಮತ್ತೆ ಕೇಳ್ತೀನೋ ಇಲ್ವೋ ಅಂತ ಆತಂಕ. ಹ್ರದಯ ಒದ್ದಾಡುತ್ತಿತ್ತು. ಕೊನೆಗೂ ಯುದ್ಧ ಮುಗಿದ ಸುದ್ದಿ ತಿಳಿದಾಗ ಮನಸ್ಸಿಗೆ ನೆಮ್ಮದಿ. ಜ್ವರ ಬಿಟ್ಟ ಮಗುವಿನ ಲವಲವಿಕೆ. ಅವತ್ತು ಸಂಜೆ ನೀನು ಫೋನ್ ಮಾಡಿದ್ಯಲ್ಲ.. ನಿನ್ನ ಮಾತು ಕೇಳಿದ ಖುಶಿಯಲ್ಲಿ ನನ್ನ ಕೊರಳಿಂದ ಸ್ವರವೇ ಹೊರಡಲಿಲ್ಲ. ಅಮ್ಮಂಗೆ ಫೋನ್ ಕೊಟ್ಟುಬಿಟ್ಟೆ. ಅವತ್ತು ಅಮ್ಮ ದೇವರಿಗೆ ಪಾಯಸ ನೈವೇದ್ಯ ಮಾಡಿದ್ಳು. " ಹೇಳಿ ಮುಗಿಸಿ ಅವನೆಡೆಗೆ ನೋಡಿದಳು. ಅವಳು ಮಾತಾದಾಗೆಲ್ಲ ಅವನು ಮೌನ. " ನೀ ಯಾಕೆ ಸುಮ್ಮನಿರ್ತೀಯಾ?" ಅಂತ ಅವಳೊಮ್ಮೆ ಕೇಳಿದ್ದಳು. ಆಗ ಅವನು "ನೀ ಮಾತಾಡ್ತಿದ್ದರೆ ಕೇಳ್ತಾನೇ ಇರ್ಬೇಕು ಅನಿಸತ್ತೆ. ಮಾತಾಡು" ಅಂದಿದ್ದ.
ಅವನು ಅವಳನ್ನೇ ನೋಡುತ್ತಾ ಕುಳಿತಿದ್ದ. ಅವಳು ಅವನೆಡೆಗೆ ತುಂಟ ನಗು ಬೀರುತ್ತಾ, "ನಿನಗೆ ನನ್ನ ನೆನಪಾಗಲಿಲ್ಲ್ವ?" ಕೇಳಿದಳು. "ತುಂಬಾ ನೆನಪು ಮಾಡಿಕೊಂಡೆ. ಜೀವನದಲ್ಲಿ ಮೊದಲ ಸಲ ಹೋರಾಡುವಾಗ ಹೆದರಿಕೆಯಾಗಿತ್ತು" ಅಂದ. ಅವನನ್ನೇ ಕಣ್ತುಂಬಿಕೊಳ್ಳುತ್ತಾ ಕುಳಿತಿದ್ದವಳು, "ಅಕ್ಕ" ಅಂತ ಕರೆದಿದ್ದು ಕೇಳಿ ಹಿಂದಿರುಗಿ ನೋಡಿದಳು. ಅಲ್ಲಿ ನಿಂತಿದ್ದ ತಂಗಿ, "ಅಮ್ಮ ಹೇಳಿದ್ರು, ಕತ್ತಲಾಯ್ತು.. ಬರಬೇಕಂತೆ" ಅಂದಳು. ಅದಾಗಲೇ ಚಂದ್ರ ಬಾನಿನಲ್ಲಿ ಮೂಡಿ ಬಂದಾಗಿತ್ತು. "ನಿನ್ನ ಜೊತೆ ಇದ್ರೆ ಸಮಯ ಹೋಗಿದ್ದೇ ಗೊತ್ತಾಗಲ್ಲ." ಹೇಳಿದಳು. "ನಂಗೂ ಅಷ್ಟೇ" ನಗುತ್ತಾ ಹೇಳಿದ ಅವನು. ಬಟ್ಟೆಗೆ ಮೆತ್ತಿದ್ದ ಧೂಳು ಕೊಡವಿಕೊಳ್ಳುತ್ತಾ ಇಬ್ಬರೂ ಎದ್ದು ನಿಂತರು.