1:56 AM

ಅವಳೇ ಇವಳು?

ಅವಳು ಮೊನ್ನೆ ಬಟ್ಟೆಯಂಗಡಿಯಲ್ಲೂ ಸಿಕ್ಕಿದ್ದಳು. ಅವಳನ್ನು ಕಂಡಿದ್ದೇ ನಂಗೆ ಪರಿಚಿತ ಮುಖ ಅನ್ನಿಸಿತು. ಮತ್ತೆ ಮತ್ತೆ ಪ್ರಯತ್ನಿಸಿ ನೆನಪು ಮಾಡಿಕೊಂಡೆ. ’ಹೌದು, ಅವಳೇ ಇವಳು’ ಅನಿಸಿತು. ’ಅಲ್ಲದೇನೂ ಇರಬಹುದು’ ಮತ್ತೊಂದು ಮನಸ್ಸು ಹೇಳಿತು. ನನ್ನ ಜೊತೆ ೧ ನೇ ಕ್ಲಾಸ್ ನಲ್ಲಿ ಕಲೀತಿದ್ದವಳು. ನಂತರ ನಾವು ಬೇರೆ ಊರಿಗೆ ಹೋಗಿದ್ದರಿಂದ ಅವಳ ಜೊತೆ ಸಂಪರ್ಕ ಇರಲಿಲ್ಲ. ನಾವು ಭೇಟಿಯಾಗದೇ ೧೨ ವರ್ಷಗಳಾಗಿದ್ದವು. ಮೊದಲಿಗಿಂತ ಎತ್ತರವಾಗಿದ್ದಳು. ದಪ್ಪವಾಗಿದ್ದಳು. ಆದರೆ ಅವಳ ಮುಖದ ಮೇಲಿನ ಆ ಕಪ್ಪು ಮಚ್ಚೆ ನೋಡಿದ ಮೇಲೆ ನಂಗೆ ಯಾವ ಅನುಮಾನವೂ ಉಳಿದಿರಲಿಲ್ಲ. ’ಗುರುತು ಸಿಕ್ಕಿಲ್ಲದಿರಬಹುದು’ ಅನ್ನಿಸಿ ನನ್ನತ್ತಲೇ ನೋಡಿದ ಅವಳನ್ನು ನೋಡಿ ಚಿಕ್ಕದಾಗಿ ನಕ್ಕೆ. ಅವಳೂ ನಕ್ಕಳು. ಅಥವಾ ನಂಗೆ ಹಾಗನಿಸಿತು. ನಾನು ಅವಳ ಕಡೆಗೇ ನೋಡುತ್ತಿದ್ದೆ. ಅವಳು ೨-೩ ಬಾರಿ ನನ್ನೆಡೆಗೆ ನೋಡಿದಳು. ತುಟಿಯಂಚಿನಲ್ಲೇ ನಕ್ಕಳು. ಅವಳು ಓರೆ ನೋಟದಿಂದ ನನ್ನತ್ತ ಗಮನಿಸುತ್ತಿದ್ದಾಳೆ ಅಂತ ನನಗನಿಸುತ್ತಿತ್ತು. ಗುರುತು ಹಿಡಿದು ಈಗ ಅವಳಾಗೇ ಮಾತಾಡಿಸುತ್ತಾಳೆ ಅಂತ ಕಾದಿದ್ದೇ ಬಂತು. ಅವಳು ಬಟ್ಟೆ ಪ್ಯಾಕ್ ಮಾಡಿಸಿಕೊಂಡು ಕೌಂಟರಿನಲ್ಲಿ ದುಡ್ಡು ಕೊಟ್ಟು ಹೊರಟೇ ಬಿಟ್ಟಳು. ಆಗ ಒಂದು ಕ್ಷಣ ನನ್ನ ಮನಸ್ಸಿನಲ್ಲಿ ’ಇವಳು ಅವಳ ಹಾಗೇ ಇರುವ ಬೇರೆ ಯಾರೋ ಆಗಿರಬಹುದೇ?’ ಅನ್ನಿಸಿತು. ಹಾಗಾಗಿ ನಾನಾಗೇ ಮಾತನಾಡಿಸಲು ಹೋಗದೆ ಸುಮ್ಮನಿದ್ದು ಬಿಟ್ಟೆ.

ಇಂದು ಈ ಜಾತ್ರೆಯ ಜನಸಂದಣಿಯಲ್ಲಿ ಅವಳ ಮುಖ ಕಾಣಿಸಿದ ಮೇಲೆ ’ಇವಳು ನನ್ನ ಆ ಬಾಲ್ಯದ ಗೆಳತೀನೇ’ ಅನ್ನೋ ಭಾವನೆ ಮನಸ್ಸಿನಲ್ಲಿ ಮೂಡಿ, ನನ್ನ - ಅವಳ ಭೇಟಿ ದೈವ ನಿಶ್ಚಯ ಅನ್ನಿಸಿಬಿಟ್ಟಿತು. ಅವಳನ್ನು ಮಾತನಾಡಿಸಲೇ ಬೇಕೆಂಬ ಉತ್ಕಟ ಹಂಬಲ ತಡೆಯಲಾರದೇ ಅವಳು ನಿಂತಿದ್ದ ಬಳೆಯಂಗಡಿಯಕಡೆ ನೋಡುತ್ತಾ ನಿಂತೆ. ರಥದ ಎದುರು ನಿಂತು ಇನ್ನೆಲ್ಲೋ ನೋಡುತ್ತಿದ್ದ ನನ್ನನ್ನು ಕಂಡ ಅಮ್ಮ ’ಏನೇ?’ ಅಂತ ಕಣ್ಣಲ್ಲೇ ಪ್ರಶ್ನಿಸಿದರು. ’ಈಗ ಬಂದೆ. ಇಲ್ಲೇ ಇರು’ ಅನ್ನುತ್ತಾ ಆ ಜನ ಸಂದಣಿಯ ನಡುವೆ ದಾರಿ ಮಾಡಿಕೊಂಡು ಅವಳು ನಿಂತಿದ್ದ ಬಳೆಯಂಗಡಿ ಸಮೀಪಿಸಿ, ಸಲಿಗೆಯಿಂದ ಅವಳ ಬೆನ್ನ ಮೇಲೆ ಕೈಯಿಟ್ಟು, ’ಹಾಯ್’ ಎಂದೆ. ಫಕ್ಕನೆ ಹಿಂದೆ ತಿರುಗಿದ ಅವಳು ನನ್ನತ್ತ ಅಪರಿಚಿತರನ್ನು ನೋಡುವ ನೋಟ ಬೀರಿದಳು. ನಾನು ನಗುತ್ತಾ, ’ಗುರುತು ಸಿಗಲಿಲ್ವ? ನಾನು ಕಣೇ.. ೧ ನೇ ಕ್ಲಾಸ್ ನಲ್ಲಿ ನಿನ್ನ ಪಕ್ಕ ಕುಳಿತುಕೊಳ್ತಿದ್ನಲ್ಲ’ ಅಂದೆ. ನಿಜವಾಗಿಯೂ ನೆನಪಾಯಿತೋ, ಅಥವಾ ಸುಮ್ಮನೆ ಹಾಗೆ ನಟಿಸಿದಳೋ.. ’ಓಹ್.. ಹಾಂ.. ಗೊತ್ತಾಯ್ತು’ ಅಂದಳು. ’ಚೆನ್ನಾಗಿದಿಯಾ?’ ಕೇಳಿದೆ. ’ಹೂಂ’ಅಂದಳು. ’ಈಗ ಇದೇ ಊರಿನಲ್ಲಿದ್ದೀಯಾ?’ ಕೇಳಿದೆ. ’ಹುಂ.. ಹುಂ’ ಅಂದಳು. ’ಮನೇಲಿ ಎಲ್ಲ ಆರಾಮಿದ್ದಾರ?’ ಕೇಳಿದೆ. ಅದಕ್ಕೂ ’ಹುಂ’ ಅಂದಳು. ’ಏನು ಓದ್ತಿದ್ದ್ದಿಯ?’ ಕೇಳಿದೆ. ’ಓದು ನಿಲ್ಲಿಸಿಬಿಟ್ಟೆ. ಕೆಲಸಕ್ಕೆ ಹೋಗ್ತಿದೀನಿ.’ ಅಂದಳು. ’ ನಿನ್ನ ತಮ್ಮ ಏನ್ ಮಾಡ್ತಿದ್ದಾನೆ?’ ಕೇಳಿದೆ. ’ತಮ್ಮ ಅಲ್ಲ, ತಂಗಿ.. ೧೦ ನೇ ಕ್ಲಾಸ್ ಅವಳು’ ಅಂದಳು. ’ಅರೇ.. ಇವಳಿಗೆ ತಮ್ಮ ಇದ್ದಿದ್ದಲ್ವಾ’ ಅಂದುಕೊಂಡವಳು, ನನ್ನ ನೆನಪೇ ಸರಿಯಿಲ್ಲವೇನೋ ಅಂತ ಸಮಾಧಾನ ಮಾಡಿಕೊಂಡೆ. ಅವಳ ಚುಟುಕಾದ ಉತ್ತರಗಳಿಂದ, ಅವಳಿಗೆ ನನ್ನ ಹತ್ತಿರ ಮಾತಾಡುವುದು ಇಷ್ಟವಿಲ್ಲವೇನೋ ಅನಿಸಿ, ’ಸರಿ ಹಾಗಾದ್ರೆ. ಇನ್ನೊಮ್ಮೆ ಸಿಗೋಣ. ನಮ್ಮನೆಗೆ ಬಾರೇ ಒಮ್ಮೆ.’ ಅಂದೆ. ಅವಳು ತುಟಿಯಂಚಿನಲ್ಲಿ ನಗು ಬೀರುತ್ತಾ ’ಖಂಡಿತ.. ಬಾಯ್’ ಅಂತ ಶುಭ ವಿದಾಯ ಹೇಳಿದಳು. ಅವಳು ಸೌಜನ್ಯಕ್ಕಾದರೂ ನನ್ನ ಬಗ್ಗೆ ಏನೂ ವಿಚಾರಿಸದಿದ್ದುದು ನಂಗೆ ಆಶ್ಚರ್ಯ ಹುಟ್ಟಿಸಿತಾದರೂ, ನಾನಾಗೇ ಏನೂ ಹೇಳಲಿಲ್ಲ. ವಿದಾಯ ಹೇಳಿ ಆ ರಶ್ ನಲ್ಲೇ ಮಧ್ಯೆ ಸ್ಥಳ ಮಾಡಿಕೊಳ್ಳುತ್ತಾ, ಅಮ್ಮನ ಬಳಿ ಬಂದು ನಿಂತೆ. ’ಯಾರದು?’ ಕೇಳಿದಳು ಅಮ್ಮ. ’ನನ್ನ ಹಳೆ ಫ್ರೆಂಡ ಅವಳು’ ಅಂದೆ. ’ ರಥವನ್ನು ನೋಡುತ್ತಾ ಅಮ್ಮ, ’ಅಲ್ನೋಡೆ. ರಥದ ತುದಿಯನ್ನ’ ಅಂದರು. ಕತ್ತೆತ್ತಿ ರಥದ ತುದಿಯನ್ನು ದಿಟ್ಟಿಸಿದೆ. ನಂಗೆ ಅಲ್ಲಿ ಅವಳ ಮುಖವೇ ಕಾಣಿಸ್ತಿತ್ತು.

3 comments:

ಧ್ಯಾನ said...
This comment has been removed by the author.
ಧ್ಯಾನ said...

ಬಾಲ್ಯದ ನವಿರು ಗೆಳೆತನದ ಹುಡುಕಾಟ. ಊರಿಂದ ಊರಿಗೆ ಹರಡಿಕೊಂಡವರಿಗೆ ಇದೇ ರೀತಿಯ ಹಪಹಪಿ ಇರುತ್ತದೆ ಅನಿಸುತ್ತೆ. ಆದರೆ ಆ ಉತ್ಕಟತೆ ಅವರಲ್ಲಿರುವುದಿಲ್ಲಾ (ಕೆಲವರನ್ನು ಹೊರತುಪಡಿಸಿ). ಅವಳು ಇವಳೇನಾ ಅಂದಾಗ ಒಂದು ವಿಚಾರ ನೆನಪಾಯಿತು ನೀವು ಶಿವಮೊಗ್ಗದ ರೇಶ್ಮಾನ?!!!!!

ಶರಶ್ಚಂದ್ರ ಕಲ್ಮನೆ said...

ಒಳ್ಳೆ ಬರಹ ರೇಷ್ಮ... ನೀವು ಕೊನೆ ಪಕ್ಷ ಮಾತಾಡಿಸುವ ಧೈರ್ಯನಾದ್ರು ಮಾಡಿದ್ರಿ... ನನಗೂ ಇಂತ ಅನುಭವ ಆಗಿದೆ... ಆದರೆ ಮಾತಾಡಿಸುವ ಧೈರ್ಯ ಮಾಡಲಿಲ್ಲ ಅಷ್ಟೇ :)