9:22 PM

ಬೆಳ್ಳಿ ಬಟ್ಟಲು

ಅಮ್ಮ ಕೊಟ್ಟ ಬೆಳ್ಳಿ ಬಟ್ಟಲಿಗೀಗ
ತುಂಬು ಐದರ ಹರೆಯ
ಕಾಲ ಮೇಲೆ ಕೂಸೇ ಇಲ್ಲ

ಕೂಸು ಹುಟ್ಟೋ ಮುಂಚೆಯೇ
ಹೊಲಿದಿಟ್ಟಿದ್ದ ಕುಲಾವಿ ಮೂಲೆ ಸೇರಿದೆ
ಕಂದನಿಗೆಂದು ತಂದಿದ್ದ ಮೂರು ಗಾಲಿಯ
ಸೈಕಲ್ ಕತ್ತಲ ಅಟ್ಟ ಏರಿದೆ

ಪುಟ್ಟ ಪಾದಗಳ ಸ್ಪರ್ಶವಿಲ್ಲದೆ
ನೆಲವೂ ಬಾಯ್ಬಿರಿದಿದೆ
ಕಂದ ಹಿಡಿದೆಳೆಯದೇ ತಾಯಿಯ
ತಾಳಿಯೂ ಸೂತಕದಲ್ಲಿದೆ

ಮನೆಯಲ್ಲಿ ಬೀಸಣಿಕೆ ಗಾಳಿಯೇ ಇಲ್ಲ
ಒಳಗೆಲ್ಲ ಧಗೆ, ಹೊರಗೂ ಹೊಗೆ
ಗೊಂಬೆಗಳೆಲ್ಲಾ ಭಣಗುಟ್ಟುತ್ತಿವೆ
ಕಂದ ತೊದಲದ ಮನೆಯಲ್ಲಿ ಮಹಾಮೌನ.

3 comments:

ranjith said...

ಕಂದ ಹಿಡಿದೆಳೆಯದೇ ತಾಯಿಯ
ತಾಳಿಯೂ ಸೂತಕದಲ್ಲಿದೆ...

ಇದು ತುಂಬಾ ಕಾವ್ಯಾತ್ಮಕವಾಗಿ ಮೂಡಿಬಂದಿದೆ... ಒಟ್ಟಾರೆ ಕೂಡ ಚಂದವಾಗಿ ಮೂಡಿದೆ ಕವಿತೆ.

Prakash Payaniga said...

blog is too good, keep updating

ರೇಶ್ಮಾ ಎನ್ said...

ಧನ್ಯವಾದಗಳು ಸರ್...:)